ಮೊಸರೆಂದರೆ ನಿಮಗಿಷ್ಟವೇ. ಪ್ರತಿ ಬಾರಿ ಪ್ಯಾಕೆಟ್ ಮೊಸರು ತಂದು ಬಳಸುವ ಬದಲು ಮನೆಯಲ್ಲೂ ರುಚಿಕರವಾದ ದಪ್ಪನೆಯ ಐಸ್ ಕ್ರೀಮ್ ನಂಥ ಮೊಸರನ್ನು ತಯಾರಿಸಬಹುದು. ಹೇಗೆನ್ನುತ್ತೀರಾ?
ಪ್ಯಾಕೆಟ್ ಹಾಲಾಗಿದ್ದರೂ ಸರಿ, ದನದ ಹಾಲಾಗಿದ್ದರೂ ಸರಿ. ಮೊದಲು ಹಾಲನ್ನು ಚೆನ್ನಾಗಿ ಕುದಿಸಿ. ಮೂರರಿಂದ ನಾಲ್ಕು ಕುದಿ ಬರಿಸಿದ ಬಳಿಕ ಕೆಳಗಿಳಿಸಿ. ಕುದಿಯುವಾಗ ಹೆಚ್ಚಿನ ನೀರು ಸೇರಿಸಿದರೆ ದಪ್ಪನೆಯ ಮೊಸರು ತಯಾರಿಸಲು ಸಾಧ್ಯವಿಲ್ಲ. ಹಾಗಾಗಿ ನೀರು ಸೇರಿಸದಿರುವುದು ಒಳ್ಳೆಯದು.
ಒಂದು ಲೀಟರ್ ಹಾಲಿಗಾದರೆ ಮೂರು ಚಮಚ ದಪ್ಪ ಮಜ್ಜಿಗೆ ಅಥವಾ ಮೊಸರು ಸೇರಿಸಿ. ಹಿಂದಿನ ರಾತ್ರಿ ಹೀಗೆ ಹೆಪ್ಪು ಮುಟ್ಟಿಸಿಟ್ಟರೆ ಮರುದಿನ ಬೆಳಗ್ಗೆ ದಪ್ಪನೆಯ ಗಟ್ಟಿ ಮೊಸರು ಸಿಗುತ್ತದೆ. ದೋಸೆ ಅಥವಾ ಇಡ್ಲಿಗೆ ನೆಂಜಿಕೊಂಡು ತಿನ್ನಲು ಇದು ಬಲು ರುಚಿ.
ಮಧ್ಯಾಹ್ನ ಊಟದ ವೇಳೆಗೆ ದಪ್ಪನೆಯ ಮೊಸರು ಬೇಕಿದ್ದರೆ ಬೆಳಿಗ್ಗೆ ಎದ್ದಾಕ್ಷಣ ಹೆಪ್ಪು ಮುಟ್ಟಿಸಿದರೆ ಸಾಕು. ಹುಳಿ ಹೆಚ್ಚು ಬೇಕಿದ್ದರೆ ಹೆಚ್ಚು ಹೆಪ್ಪು ಅಥವಾ ಮಜ್ಜಿಗೆ ಸೇರಿಸಿ. ನಿತ್ಯ ಮೊಸರನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಚುರುಕುಗೊಂಡು, ಹೊಟ್ಟೆಯ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತವೆ.