ಮೊದಲೆಲ್ಲ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕು ಅಂದ್ರೆ ತಿಂಗಳುಗಟ್ಟಲೆ ಆರ್‌ಟಿಓ ಕಚೇರಿಗೆ ಸುತ್ತಬೇಕಿತ್ತು. ಆದ್ರೀಗ ವ್ಯವಸ್ಥೆ ಕೊಂಚ ಬದಲಾಗಿದೆ. ನೀವು ಡಿಎಲ್ ಪಡೆಯಲು ಪದೇ ಪದೇ RTOಗೆ ಹೋಗಬೇಕಾಗಿಲ್ಲ. ಅಥವಾ ಯಾವುದೇ ಏಜೆಂಟ್ ಮೂಲಕವೂ ಅರ್ಜಿ ಸಲ್ಲಿಸಬೇಕಾಗಿಲ್ಲ. ಮನೆಯಲ್ಲೇ ಕುಳಿತು ಡ್ರೈವಿಂಗ್ ಲೈಸೆನ್ಸ್ ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ, ಡಿಎಲ್ ಮತ್ತು ಕಂಡಕ್ಟರ್ ಲೈಸೆನ್ಸ್‌ಗೆ ಸಂಬಂಧಿಸಿದ ಸುಮಾರು 58 ಸೇವೆಗಳನ್ನು ನಾಗರಿಕರಿಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಲು ಅನುಮತಿಸಿದೆ. ಈ 58 ಆನ್‌ಲೈನ್ ಸೇವೆಗಳ ಪ್ರಯೋಜನವು ಆಧಾರ್ ಪರಿಶೀಲನೆ ಮಾಡಿದ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ.
ಆಧಾರ್ ಪರಿಶೀಲನೆಯ ಆಧಾರದ ಮೇಲೆ, ಡ್ರೈವಿಂಗ್ ಲೈಸೆನ್ಸ್ ಕಲಿಯಲು ಅರ್ಜಿ ಸಲ್ಲಿಸುವುದು, ಡ್ರೈವಿಂಗ್ ಲೈಸೆನ್ಸ್ ನವೀಕರಣ ಸೇರಿದಂತೆ ಹಲವು ಕೆಲಸಗಳನ್ನು ಮನೆಯಲ್ಲಿಯೇ ಕುಳಿತು ಮಾಡಬಹುದು.
ಇಂಟರ್‌ನ್ಯಾಶನಲ್ ಡ್ರೈವಿಂಗ್ ಪರ್ಮಿಟ್‌ಗೆ ಅರ್ಜಿ ಸಲ್ಲಿಕೆ, ಪರವಾನಗಿಯಲ್ಲಿನ ವಿಳಾಸವನ್ನು ನವೀಕರಣ, ವಾಹನ ವರ್ಗಾವಣೆಗೆ ಅರ್ಜಿ ಸಲ್ಲಿಕೆಯನ್ನು ಕೂಡ ಆನ್‌ಲೈನ್‌ನಲ್ಲೇ ಮಾಡಬಹುದು.
ಆಧಾರ್ ಕಾರ್ಡ್ ಅಗತ್ಯವಿದೆಯೇ ?
ಯಾವುದೇ ವ್ಯಕ್ತಿಯು ಈ ಸೇವೆಗಳ ಪ್ರಯೋಜನವನ್ನು ಪಡೆಯಬಹುದು, ಆದರೆ ಅವರು ಆಧಾರ್ ಕಾರ್ಡ್ ಅನ್ನು ಹೊಂದಿರಬೇಕು. ಆದರೆ ಸಿಎಮ್‌ವಿಆರ್-1989 ರ ನಿಯಮದ ಪ್ರಕಾರ, ಆಧಾರ್ ಹೊರತುಪಡಿಸಿ ಯಾವುದೇ ಪರ್ಯಾಯ ದಾಖಲೆಯನ್ನು ಸಹ ಸಲ್ಲಿಸಬಹುದು. ಈ ರೀತಿ ಆನ್‌ಲೈನ್ ಸೌಲಭ್ಯ ಕಲ್ಪಿಸಿರುವುದರಿಂದ ಆರ್‌ಟಿಒ ಕಚೇರಿಯಲ್ಲಿ ದಟ್ಟಣೆ ಕಡಿಮೆಯಾಗುತ್ತದೆ. ಜನರ ಸಮಯವೂ ಉಳಿತಾಯವಾಗಲಿದೆ.
ಡ್ರೈವಿಂಗ್ ಲೈಸೆನ್ಸ್ ಪಡೆಯಲು 18 ವರ್ಷವೇ ಆಗಿರಬೇಕು ಎಂದುಕೊಳ್ಳಬೇಡಿ. ಈಗಿರುವ ನಿಯಮಗಳ ಪ್ರಕಾರ 16 ರಿಂದ 18 ವರ್ಷದೊಳಗಿನವರೂ ಕಲಿಕಾ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸಬಹುದು. ಆದರೆ ಈ ಪರವಾನಗಿ ಹೊಂದಿರುವ ಜನರು ಗೇರ್ ಇಲ್ಲದೆ ಮಾತ್ರ ವಾಹನ ಚಾಲನೆ ಮಾಡಬಹುದು. ಅಲ್ಲದೆ, ಈ ಪರವಾನಗಿಯನ್ನು ಪಡೆಯಲು ಪೋಷಕರ ಅನುಮೋದನೆಯನ್ನು ಹೊಂದಿರುವುದು ಅವಶ್ಯಕ.