ನಮ್ಮ ಮನೆಗೆ ಅನೇಕ ಅನಗತ್ಯ ಅತಿಥಿಗಳು ಬರುತ್ತಲೇ ಇರುತ್ತವೆ. ಅವುಗಳಲ್ಲಿ ಅತ್ಯಂತ ಕಿರಿಕಿರಿ ಉಂಟುಮಾಡುವ ಜೀವಿ ಎಂದರೆ ಹಲ್ಲಿ. ಅನೇಕರು ಹಲ್ಲಿಯನ್ನು ನೋಡಿದ್ರೆ ಭಯಪಡ್ತಾರೆ. ಹಲ್ಲಿ ಮನೆಯಲ್ಲಿರುವ ಕೀಟಗಳನ್ನೆಲ್ಲ ತಿಂದು ನಮಗೆ ಒಂದು ರೀತಿಯಲ್ಲಿ ಸಹಾಯ ಮಾಡುತ್ತದೆ.
ಆದರೆ ಅದು ನೀವು ಸೇವಿಸುವ ಆಹಾರವನ್ನು ಸ್ಪರ್ಷಿಸಿದ್ರೆ, ಸಾಂಬಾರ್, ಹಾಲಿನಂತಹ ಪದಾರ್ಥಗಳಲ್ಲಿ ಬಿದ್ದರೆ ಅಪಾಯ ತಪ್ಪಿದ್ದಲ್ಲ. ಹಾಗಾಗಿ . ಮನೆಯಲ್ಲಿರುವ ಹಲ್ಲಿಗಳನ್ನು ಓಡಿಸಲು ನಾವು ಸಾಕಷ್ಟು ಕಸರತ್ತು ಮಾಡುತ್ತೇವೆ. ಹಲ್ಲಿಯನ್ನು ಮನೆಯಿಂದ ದೂರವಿಡಲು ಸುಲಭ ಉಪಾಯಗಳೇನು ಅನ್ನೋದನ್ನು ನೋಡೋಣ.
ಅಳಿದುಳಿದ ಆಹಾರದ ವಾಸನೆಯು ಹಲ್ಲಿಗಳನ್ನು ಆಕರ್ಷಿಸುತ್ತದೆ. ಆದ್ದರಿಂದ ಅಡುಗೆ ಮನೆಯ ಒಲೆಯ ಬದಿಯಲ್ಲೋ ಅಥವಾ ಕಬೋರ್ಡಿನಲ್ಲೋ ಆಹಾರವನ್ನ ಇರಿಸುವ ಬದಲು ಪ್ರಿಡ್ಜ್ನಲ್ಲಿ ಸುರಕ್ಷಿತವಾಗಿಡಿ.
ಸೀಲಿಂಗ್, ಕಿಟಕಿಗಳು, ಎಕ್ಸಾಸ್ಟ್ ಫ್ಯಾನ್ ಹೀಗೆ ವಿವಿಧೆಡೆ ಇರುವ ಬಿರುಕುಗಳ ಮೂಲಕ ಹಲ್ಲಿಗಳು ಮನೆಯನ್ನು ತಲುಪುತ್ತವೆ. ಅವುಗಳನ್ನು ತಡೆಯಲು ಯತ್ನಿಸಬೇಕು. ಕೋಣೆಯಲ್ಲಿ ಉಷ್ಣತೆಯು ಅಧಿಕವಾಗಿದ್ದರೆ, ಹಲ್ಲಿಗಳು ಒಳಗೆ ಬರಲು ಪ್ರಯತ್ನಿಸಬಹುದು, ಆದ್ದರಿಂದ ಬಾಗಿಲು ಮುಚ್ಚಿ. ಮನೆ ಕೊಳಕಾಗಿದ್ದರೆ ಅದು ಹಲ್ಲಿಗಳನ್ನು ಆಕರ್ಷಿಸುತ್ತದೆ. ಆದ್ದರಿಂದ ಸ್ಟೋರ್ ರೂಮ್ ಅಥವಾ ಶೇಖರಣಾ ಸ್ಥಳವನ್ನು ಸ್ವಚ್ಛವಾಗಿಡಿ. ಕೋಣೆಯಲ್ಲಿ ಇರಿಸಲಾಗಿರುವ ಬಿಸಿನೀರಿನಿಂದ ಕೂಡ ಹಲ್ಲಿಗಳು ಆಕರ್ಷಿತವಾಗುತ್ತವೆ.
ಮನೆಯನ್ನು ಸ್ವಚ್ಛವಾಗಿಡಿ: ಹಲ್ಲಿಗಳು ನಿಮ್ಮ ಮನೆಯ ಸುತ್ತ ಮುತ್ತ ಬರಬಾರದು ಎಂದರೆ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರಿಂದ ಮನೆಯಲ್ಲಿ ಕೀಟಗಳು ಮತ್ತು ಜೇಡಗಳು ಇರುವುದಿಲ್ಲ. ಹಲ್ಲಿಗಳು ಕೂಡ ಹುಡುಕಿಕೊಂಡು ಬರುವುದಿಲ್ಲ. ಪ್ರತಿ ವಾರ ಮನೆಯ ಮೂಲೆಗಳನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಿ. ಕೆಲವರು ಅಡುಗೆಮನೆ ಮತ್ತು ಸಿಂಕ್ ಅನ್ನು ತುಂಬಾ ಕೊಳಕಾಗಿಟ್ಟುಕೊಳ್ಳುತ್ತಾರೆ. ಈ ರೀತಿ ಮಾಡುವುದರಿಂದ ಹಲ್ಲಿ ಮನೆಯೊಳಕ್ಕೆ ಬರುತ್ತದೆ. ಆಹಾರವನ್ನು ತೆರೆದಿಡಬೇಟಿ, ಯಾವಾಗಲು ಮುಚ್ಚಿಡಿ.
ಈರುಳ್ಳಿ ಮತ್ತು ಬೆಳ್ಳುಳ್ಳಿ: ಈರುಳ್ಳಿ ಮತ್ತು ಬೆಳ್ಳುಳ್ಳಿ ಹಲ್ಲಿಯ ಇಂದ್ರಿಯಗಳ ಮೇಲೆ ದಾಳಿ ಮಾಡುವ ಬಲವಾದ ವಾಸನೆಯನ್ನು ಹೊಂದಿದೆ. ಹಲ್ಲಿ ಬರುವ ಸ್ಥಳಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ ಇಟ್ಟರೆ ಅವುಗಳನ್ನು ತಡೆಯಬಹುದು. ಮನೆಯಲ್ಲಿ ಕೆಲವು ಈರುಳ್ಳಿ ತುಂಡುಗಳು ಅಥವಾ ಹಸಿ ಬೆಳ್ಳುಳ್ಳಿ ಎಸಳುಗಳನ್ನು ಇರಿಸಿ.
ಬಳಸದ ಆಹಾರವನ್ನು ವಿಲೇವಾರಿ ಮಾಡಿ: ಹಲ್ಲಿಗಳು ಸಾಮಾನ್ಯವಾಗಿ ತೆರೆದಿಟ್ಟ ಉಳಿದ ಆಹಾರವನ್ನು ಹುಡುಕಿಕೊಂಡು ಮನೆಗೆ ಪ್ರವೇಶಿಸುತ್ತವೆ. ಆದ್ದರಿಂದ ಉಳಿದ ಆಹಾರವನ್ನು ಸಾಧ್ಯವಾದಷ್ಟು ಬೇಗ ಎಸೆಯಿರಿ. ಇಲ್ಲವಾದರೆ ಫ್ರಿಡ್ಜ್ನಲ್ಲಿಡಿ.
ನಾಫ್ತಾಲೀನ್ ಚೆಂಡುಗಳು: ನಾಫ್ತಾಲೀನ್ ಮಾತ್ರೆಗಳು ಮನೆಯಿಂದ ಹಲ್ಲಿಗಳನ್ನು ಓಡಿಸಲು ಪರಿಣಾಮಕಾರಿಯಾಗಿವೆ. ಆದರೆ ಸಾಕು ಪ್ರಾಣಿಗಳು ಅಥವಾ ಮಕ್ಕಳಿರುವ ಮನೆಗಳಲ್ಲಿ ಎಲ್ಲೆಂದರಲ್ಲಿ ನಾಫ್ತಾಲಿನ್ ಬಾಲ್ಗಳನ್ನು ಹಾಕಿಡಬೇಡಿ. ಏಕೆಂದರೆ ನಾಫ್ತಾಲೀನ್ ಚೆಂಡುಗಳು ಅವರ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಲ್ಲಿಗಳು ನಾಫ್ತಾಲೀನ್ ಬಾಲ್ಸ್ನ ಬಲವಾದ ವಾಸನೆಯಿಂದಾಗಿ ಮನೆಗೆ ಬರುವುದಿಲ್ಲ. ಈ ಮಾತ್ರೆಗಳನ್ನು ಅಡುಗೆಮನೆಯ ಕಪಾಟುಗಳು, ವಾರ್ಡ್ರೋಬ್, ಸಿಂಕ್ಗಳ ಅಡಿಯಲ್ಲಿ ಇರಿಸುವ ಮೂಲಕ ಹಲ್ಲಿಗಳನ್ನು ಓಡಿಸಬಹುದು.
ಕೋಣೆಯ ಉಷ್ಣಾಂಶವನ್ನು ಕಡಿಮೆ ಮಾಡಿ: ಹಲ್ಲಿಗಳು ತಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಅವರು ಬೆಚ್ಚಗಿನ ವಾತಾವರಣವನ್ನು ಇಷ್ಟಪಡುತ್ತಾರೆ. ನೀವು ಮನೆಯಲ್ಲಿ ಎಸಿ ಬಳಸಿದರೆ ಅದರ ತಾಪಮಾನವನ್ನು ಕಡಿಮೆ ಮಾಡಿ. ತಂಪಾದ ತಾಪಮಾನದಲ್ಲಿ ಬದುಕಲಾಗದೇ ಹಲ್ಲಿಗಳು ಓಡಿಹೋಗುತ್ತವೆ.
ಪೆಪ್ಪರ್ ಸ್ಪ್ರೇ: ಹಲ್ಲಿಯನ್ನು ಕೊಲ್ಲಲು ಬಯಸದೇ ಇದ್ದರೆ ಪೆಪ್ಪರ್ ಸ್ಪ್ರೇ ಉತ್ತಮ ಆಯ್ಕೆ. ಹಲ್ಲಿಗೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ, ಅದರ ವಾಸನೆಗೆ ಹಲ್ಲಿ ಓಡಿ ಹೋಗುತ್ತದೆ. ಹಲ್ಲಿಗಳ ಕಣ್ಣಿಗೆ ಕೂಡ ಅದು ಕಿರಿಕಿರಿ ಉಂಟು ಮಾಡುತ್ತದೆ.