ಮನೆಯಲ್ಲಿ ಸದಾ ಗುಂಯ್‌ಗುಡುವ ನೊಣಗಳು ಎಲ್ಲೆಂದರೆಲ್ಲಿ ಕುಳಿತು ಕಿರಿಕಿರಿ ಉಂಟುಮಾಡುತ್ತವೆ. ನಾವು ತಿನ್ನೋ ಆಹಾರಗಳ ಮೇಲೂ ನೊಣಗಳು ಕುಳಿತುಕೊಳ್ಳೋದ್ರಿಂದ ಆರೋಗ್ಯಕ್ಕೂ ಅವು ಅಪಾಯಕಾರಿಯಾಗಿವೆ.
ಮನೆಗೆ ಅತಿಥಿಗಳು ಬಂದಾಗಲಂತೂ ಚಹಾ ತಿಂಡಿಗಳ ಮೇಲೆ ನೊಣಗಳು ಸುಳಿದಾಡಿದ್ರೆ ನಾವು ಮುಜುಗರಕ್ಕೊಳಗಾಗುತ್ತೇವೆ. ನೊಣಗಳ ಕಾಟಕ್ಕೆ ಶಾಶ್ವತ ಪರಿಹಾರವನ್ನು ಹುಡುಕಬೇಕು. ಅದಕ್ಕೆ ನೀವು ಮನೆಯಲ್ಲೇ ಮಾಡಬಹುದಾದ ಕೆಲವೊಂದು ಪರಿಹಾರಗಳಿವೆ.
ಹಾಲು ಮತ್ತು ಕಾಳುಮೆಣಸು : ನೊಣಗಳನ್ನು ಶಾಶ್ವತವಾಗಿ ಓಡಿಸಲು ಹಾಲು ಮತ್ತು ಕಾಳುಮೆಣಸನ್ನು ಬಳಸಬಹುದು. ಒಂದು ಲೋಟ ಹಾಲು ತೆಗೆದುಕೊಳ್ಳಿ, ಅದಕ್ಕೆ 3 ಚಮಚ ಸಕ್ಕರೆ ಮತ್ತು 1 ಚಮಚ ಕಾಳುಮೆಣಸಿನ ಪುಡಿ ಸೇರಿಸಿ. ನೊಣಗಳು ಹೆಚ್ಚಾಗಿ ಹಾರಾಡುವ ಜಾಗದಲ್ಲಿ ಅದನ್ನು ಇರಿಸಿ. ಹಾಲಿನ ವಾಸನೆ ಬಂದ ತಕ್ಷಣ ನೊಣಗಳು ಕೆಲವೇ ಕ್ಷಣಗಳಲ್ಲಿ ಅದರ ಮೇಲೆ ಕುಳಿತುಕೊಳ್ಳಲು ಪ್ರಾರಂಭಿಸುತ್ತವೆ ಮತ್ತು ಅದರಲ್ಲಿ ಮುಳುಗಿ ಸಾಯುತ್ತವೆ.
ತುಳಸಿ-ಪುದೀನಾ: ತುಳಸಿ ಮತ್ತು ಪುದೀನಾ ಕೂಡ ನೊಣಗಳನ್ನು ಮನೆಯಿಂದ ದೂರವಿಡಲು ಪರಿಣಾಮಕಾರಿ. ತುಳಸಿ ಮತ್ತು ಪುದೀನಾ ಎಲೆಗಳನ್ನು ತೆಗೆದುಕೊಂಡು ಒಣಗಿಸಿ. ನಂತರ ಆ ಒಣ ಎಲೆಗಳನ್ನು ಪುಡಿ ಮಾಡಿ ನೀರಿನಲ್ಲಿ ಮಿಶ್ರಣ ಮಾಡಿ. ನೊಣಗಳು ಹೆಚ್ಚಿರುವ ಸ್ಥಳಗಳಲ್ಲಿ ಈ ದ್ರಾವಣವನ್ನು ಸಿಂಪಡಿಸಿ. ಈ ತುಳಸಿ-ಪುದೀನಾ ಪುಡಿ ಕೀಟನಾಶಕವಾಗಿ ಕೆಲಸ ಮಾಡುತ್ತದೆ ಮತ್ತು ನೊಣಗಳು ಒಂದೊಂದಾಗಿ ಸಾಯಲು ಪ್ರಾರಂಭಿಸುತ್ತವೆ.
ಕಾರ್ನಿವೋರಸ್: ಕಾರ್ನಿವೋರಸ್ ಎಂಬ ಸಸ್ಯವನ್ನು ಸಹ ನೆಡಬಹುದು. ಈ ಸಸ್ಯವು ಕೀಟಗಳನ್ನು ತಿನ್ನುತ್ತದೆ. ಅದರ ಎಲೆಗಳ ಬಾಯಿ ತೆರೆದಿರುತ್ತದೆ ಮತ್ತು ಯಾವುದೇ ಕೀಟವು ಅವುಗಳ ಮೇಲೆ ಕುಳಿತ ತಕ್ಷಣ, ಆ ಸಸ್ಯವು ಅವುಗಳನ್ನು ತಕ್ಷಣವೇ ಹಿಡಿಯುತ್ತದೆ. ಇಂತಹ 2-3 ಗಿಡಗಳನ್ನು ಮನೆಯಲ್ಲಿ ನೆಟ್ಟರೆ ನೊಣಗಳಿಂದ ಶಾಶ್ವತವಾಗಿ ಮುಕ್ತಿ ಪಡೆಯಬಹುದು.
ಉಪ್ಪು ನೀರು: ನೊಣಗಳನ್ನು ಓಡಿಸಲು ಉಪ್ಪುನೀರನ್ನು ಬಳಸಬಹುದು. ಒಂದು ಲೋಟ ನೀರನ್ನು ತೆಗೆದುಕೊಂಡು ಅದರಲ್ಲಿ 2 ಚಮಚ ಉಪ್ಪನ್ನು ಮಿಶ್ರಣ ಮಾಡಿ. ಸ್ಪ್ರೇ ಮೂಲಕ ಈ ಮಿಶ್ರಣವನ್ನು ನೊಣಗಳ ಮೇಲೆ ಸಿಂಪಡಿಸಿ. ಉಪ್ಪು ನೀರು ದೇಹದ ಮೇಲೆ ಬಿದ್ದಾಗ, ನೊಣಗಳು ತಕ್ಷಣವೇ ಅಲ್ಲಿಂದ ಓಡಿಹೋಗುತ್ತವೆ.
ಆಪಲ್ ಸೈಡರ್ ವಿನೆಗರ್: ಆಪಲ್ ಸೈಡರ್ ವಿನೆಗರ್ ಕೂಡ ನೊಣಗಳಿಗೆ ಮಾರಕವಾಗಿದೆ. ಗಾಜಿನ ಪಾತ್ರೆಯೊಂದರಲ್ಲಿ ಆಪಲ್ ಸೈಡರ್ ವಿನೆಗರ್ ಅನ್ನು ತುಂಬಿಸಿ. ಇದಕ್ಕೆ ಕೆಲವು ಹನಿ ಸೋಪ್ ಅನ್ನು ಸೇರಿಸಿ. ನಂತರ ಲಂಚ್ ಬಾಕ್ಸ್ ನಲ್ಲಿ ಬಳಸುವ ಫಾಯಿಲ್ ಪೇಪರ್‌ನಿಂದ ಆ ಗ್ಲಾಸ್ ಅನ್ನು ಬಿಗಿಯಾಗಿ ಮುಚ್ಚಿ. ಅದಕ್ಕೆ 3-4 ಸ್ಥಳಗಳಲ್ಲಿ ರಂಧ್ರಗಳನ್ನು ಮಾಡಿ. ನೊಣಗಳಿರುವ ಜಾಗದಲ್ಲಿ ಗಾಜಿನ ಪಾತ್ರೆಯನ್ನಿಡಿ. ನೊಣಗಳು ಆಪಲ್ ವಿನೆಗರ್ ಕುಡಿಯಲು ರಂಧ್ರದೊಳಗೆ ಹೋದ ತಕ್ಷಣ, ಡಿಶ್ ಸೋಪಿನಲ್ಲಿ ಮುಳುಗಿ ಸಾಯುತ್ತವೆ.