ಸ್ಯಾಂಡ್ ವಿಚ್, ಪಿಜ್ಜಾ ಏನಾದರೂ ಮಾಡುವುದಕ್ಕೆ ಚೀಸ್ ಬಳಸುತ್ತಿರುತ್ತೇವೆ. ಇದನ್ನು ಹೊರಗಡೆಯಿಂದ ತರುವುದು ಎಂದರೆ ತುಸು ದುಬಾರಿ.
ಮನೆಯಲ್ಲಿಯೇ ಸುಲಭವಾಗಿ ಚೀಸ್ ಮಾಡಿಕೊಂಡರೆ ಖರ್ಚು ಕಡಿಮೆಯಾಗುತ್ತದೆ. ಮಾಡುವ ವಿಧಾನ ಇಲ್ಲಿದೆ.
2 ಲೀಟರ್ ಹಾಲು, ¼ ಕಪ್ – ವಿನೇಗರ್, ½ ಟೇಬಲ್ ಸ್ಪೂನ್ – ಉಪ್ಪು.
ಹಾಲನ್ನು ಒಂದು ಪಾತ್ರೆಗೆ ಹಾಕಿ ಗ್ಯಾಸ್ ಮೇಲೆ ಇಡಿ. ಇದನ್ನು ಒಂದು ಸೌಟಿನ ಸಹಾಯದಿಂದ ಕೈಯಾಡಿಸುತ್ತಾ ಇರಿ. ಹಾಲು ಉಗುರು ಬೆಚ್ಚಗೆ ಆಗುತ್ತಿದ್ದಂತೆ ಗ್ಯಾಸ್ ಆಪ್ ಮಾಡಿ ಇದಕ್ಕೆ ವಿನೇಗರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಹಾಲು ಒಡೆಯುತ್ತದೆ. ಮೊಸರಿನ ರೀತಿ ಆಗುತ್ತದೆ. ಇದಕ್ಕೆ 1 ಪ್ಲೇಟ್ ಮುಚ್ಚಿ 15 ನಿಮಿಷಗಳ ಕಾಲ ಹಾಗೇಯೇ ಇಟ್ಟುಬಿಡಿ.
ಇದನ್ನು ಒಂದು ತೆಳುವಾದ ಬಟ್ಟೆಗೆ ಹಾಕಿಕೊಂಡು ಸೋಸಿಕೊಳ್ಳಿ. ಸೋಸಿಕೊಂಡ ನೀರಿಗೆ ಉಪ್ಪು ಹಾಕಿ ಗ್ಯಾಸ್ ಮೇಲೆ ಇಡಿ. ಇದು ಬಿಸಿಯಾದರೆ ಸಾಕು ಕುದಿಯುವುದು ಬೇಡ. ನಂತರ ಬಟ್ಟೆಯಲ್ಲಿದ್ದ ಚೀಸ್ ಅನ್ನು ಒಂದು ಜಾಲರಿ ಸೌಟಿಗೆ ಹಾಕಿಕೊಂಡು ಅದನ್ನು ಈ ನೀರಿಗೆ ಮುಳುಗಿಸಿ ಎತ್ತಿ ನಂತರ ಚೀಸ್ ನಲ್ಲಿರುವ ನೀರನ್ನು ಹಿಂಡಿ ಹೀಗೆ 5 ಸಲ ಮಾಡಿ. ಹೀಗೆ ಮಾಡುವುದರಿಂದ ಚೀಸ್ ಚೆನ್ನಾಗಿ ಆಗುತ್ತದೆ.
ನಂತರ ಈ ಚೀಸ್ ಅನ್ನು ಒಂದು ಬೌಲ್ ಗೆ ಹಾಕಿಕೊಂಡು ಅದರ ಮೇಲೆ ತಣ್ಣಗಿನ ನೀರು ಹಾಕಿ 2 ನಿಮಿಷಗಳ ಕಾಲ ಹಾಗೇಯೇ ಇಟ್ಟು ಬಿಡಿ. ಆಮೇಲೆ ಇದನ್ನು ತೆಗೆದು ಒಂದು ತೆಳುವಾದ ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ಫ್ರಿಡ್ಜ್ ನಲ್ಲಿ 2 ಗಂಟೆಗಳ ಕಾಲ ಇಟ್ಟು ನಂತರ ಬಳಸಿ.