ಕೆಲಸದ ಒತ್ತಡದಲ್ಲಿ ಸರಿಯಾದ ಸಮಯ ಸಿಗೋದಿಲ್ಲ. ಜೊತೆಗೆ ಆಲಸ್ಯ ಬೇರೆ. ಹಾಗಾಗಿ ಅನೇಕ ಪುರುಷರು ಶೇವಿಂಗ್ ಮಾಡಿಸಿಕೊಳ್ಳಲು ಪಾರ್ಲರ್ ಮೊರೆ ಹೋಗ್ತಾರೆ. ಪಾರ್ಲರ್ ನಲ್ಲಿ ಶೇವಿಂಗ್ ಮಾಡಿಸಿಕೊಳ್ಳುವುದರಿಂದ ಜೇಬಿಗೆ ಕತ್ತರಿ ಬೀಳುತ್ತದೆ.
ವಾರಕ್ಕೆರಡು ಬಾರಿ ಶೇವಿಂಗ್ ಮಾಡಿಸಿಕೊಳ್ಳುವವರ ಸ್ಕಿನ್ ನಿಧಾನವಾಗಿ ಹಾಳಾಗುತ್ತ ಬರುತ್ತೆ. ಹಾಗಾಗಿ ವಾರಕ್ಕೊಮ್ಮೆ ಮನೆಯಲ್ಲಿಯೇ ಶೇವಿಂಗ್ ಮಾಡಿಕೊಂಡು ಗ್ಲೋ ಸ್ಕಿನ್ ನಿಮ್ಮದಾಗಿಸಿಕೊಳ್ಳಬಹುದು.
ಶೇವಿಂಗ್ ನಂತರ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವರ ಚರ್ಮ ಒಣಗಿದ್ರೆ ಮತ್ತೆ ಕೆಲವರಿಗೆ ತುರಿಕೆ ಕಾಣಿಸಿಕೊಳ್ಳುತ್ತೆ. ಚರ್ಮ ಒರಟಾಗುತ್ತದೆ. ಗಾಯಗಳಾಗುವುದೂ ಉಂಟು. ಹಾಗಾಗಿ ಮನೆಯಲ್ಲಿ ಶೇವಿಂಗ್ ಮಾಡಿಕೊಳ್ಳಲು ಅನೇಕರು ಹೆದರ್ತಾರೆ. ಶೇವಿಂಗ್ ಕ್ರೀಂ ಬಳಸುವುದು ಎಲ್ಲ ಪುರುಷರಿಗೂ ಇಷ್ಟವಾಗುವುದಿಲ್ಲ. ಹಾಗಿರುವಾಗ ಕೆಲವೊಂದು ಟಿಪ್ಸ್ ಅನುಸರಿಸಿ ಮನೆಯಲ್ಲಿ ಭಯವಿಲ್ಲದೆ ಶೇವಿಂಗ್ ಮಾಡಿಕೊಳ್ಳಬಹುದು.
ಕೆಲವರು ಶೇವಿಂಗ್ ಮಾಡುವಾಗ ಹೇಗೆಂದರೆ ಹಾಗೆ ರೇಜರ್ ಬಳಸ್ತಾರೆ. ಮೇಲೆ, ಕೆಳಗೆ, ಅಡ್ಡ ರೇಜರ್ ಉಪಯೋಗಿಸ್ತಾರೆ. ಯಾವಾಗಲೂ ಒಂದು ಮುಖದಲ್ಲಿ ರೇಜರ್ ಬಳಸಬೇಕು.
ಶೇವಿಂಗ್ ಮಾಡಿದ ನಂತ್ರ ಕೆಲವರು ಕ್ರೀಂ ಹಚ್ಚಿಕೊಳ್ತಾರೆ. ಮತ್ತೆ ಕೆಲವರು ಹಾಗೆ ಬಿಡ್ತಾರೆ. ಇದರಿಂದ ಉರಿ ಕಾಣಿಸಿಕೊಳ್ಳುತ್ತೆ. ಅಂತವರು ಅಲವೇರಾ ರಸವನ್ನು ಹಚ್ಚಿಕೊಳ್ಳುವುದು ಒಳ್ಳೆಯದು. ಇದರಿಂದ ಉರಿ ಕಾಣಿಸಿಕೊಳ್ಳುವುದಿಲ್ಲ.
ಶೇವಿಂಗ್ ಮಾಡುವ ವೇಳೆ ಗಾಯವಾದ್ರೆ ಭಯಪಡುವ ಅಗತ್ಯವಿಲ್ಲ. ಅರಿಶಿನದ ಪೇಸ್ಟ್ ಮಾಡಿ ಹಚ್ಚಿಕೊಳ್ಳಿ. ಇದು ಚರ್ಮಕ್ಕೆ ಸೋಂಕು ತಗಲುವುದನ್ನು ತಪ್ಪಿಸುತ್ತದೆ.
ಶೇವಿಂಗ್ ಮಾಡುವ ಮೊದಲ ಹಾಗೂ ನಂತ್ರ ಮಸಾಜ್ ಮಾಡಿಕೊಳ್ಳಬೇಕು. ಎಣ್ಣೆಯಿಂದ ಗಡ್ಡ ಹಾಗೂ ಮುಖವನ್ನು ಮಸಾಜ್ ಮಾಡಿಕೊಳ್ಳಿ. ರಾತ್ರಿ ಎಣ್ಣೆ ಮಸಾಜ್ ಮಾಡಿ ಮಲಗಿ. ಬೆಳಿಗ್ಗೆ ಎದ್ದ ನಂತ್ರ ಶೇವಿಂಗ್ ಮಾಡಿಕೊಳ್ಳಿ. ಇದರಿಂದ ಚರ್ಮ ಮೃದುವಾಗಿ ಶೇವಿಂಗ್ ಮಾಡುವುದು ಸುಲಭವಾಗುತ್ತದೆ.
ಒಣಗಿದ ಚರ್ಮವಿರುವಾಗ ಎಂದೂ ಶೇವಿಂಗ್ ಮಾಡಬೇಡಿ. ಸಮಯವಿದ್ದಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಆಗ ಚರ್ಮ ಮೃದುವಾಗುವ ಜೊತೆಗೆ ಕೂದಲು ಬಿಡಿಬಿಡಿಯಾಗುತ್ತದೆ. ಸಮಯವಿಲ್ಲದ ವೇಳೆ ಬಿಸಿ ನೀರಿನಿಂದ ಮುಖ ತೊಳೆದು 10 ನಿಮಿಷ ಹಾಗೆ ಬಿಡಿ. ನಂತ್ರ ಶೇವಿಂಗ್ ಮಾಡಿಕೊಳ್ಳಿ.