ಮನೆಯನ್ನು ಸುಂದರವಾಗಿ ಅಲಂಕರಿಸಬೇಕು, ಆಕರ್ಷಕವಾಗಿ ಕಾಣುವಂತೆ ಮಾಡಬೇಕು ಎಂಬ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ. ಲಾಕ್ ಡೌನ್ ಕಾರಣದಿಂದ ಮನೆಯೇ ಕಚೇರಿಯಾದ ಪರಿಣಾಮ ನೀವು ಹೆಚ್ಚಿನ ಸಮಯವನ್ನು ಮನೆಯಲ್ಲೇ ಕಳೆಯಬೇಕಾಬಹುದು. ಅದಕ್ಕಾಗಿ ನೀವು ಬೇಸರಿಸುವ ಬದಲು ಮನೆಯನ್ನೇ ಅನುಕೂಲಕರವಾಗಿ ಬದಲಾಯಿಸಿಕೊಳ್ಳಬಹುದು.
ಕೊಠಡಿಯ ಲೈಟ್ ಬದಲಾಯಿಸುವುದರಿಂದ ಅದರ ಲುಕ್ ಅನ್ನೇ ವಿಶಿಷ್ಟಗೊಳಿಸಬಹುದು ಎಂಬುದನ್ನು ನೀವು ನಂಬುತ್ತೀರಾ. ಒಮ್ಮೆ ಪ್ರಯತ್ನಿಸಿ ನೋಡಿ. ಸಣ್ಣ ಕಡಿಮೆ ಬೆಳಕು ನೀಡುವ ಬಲ್ಬ್ ಬದಲು ಮಾರುಕಟ್ಟೆಯಲ್ಲಿ ದೊರೆಯುವ ನೂತನ ವಿನ್ಯಾಸದ ಕಡಿಮೆ ವಿದ್ಯುತ್ ಬಳಸಿ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುವ ಲೈಟ್ ಆಯ್ಕೆ ಮಾಡಿ.
ಕರ್ಟನ್ ಬದಲಾಯಿಸಿ. ಹಳೆಯ ಕರ್ಟನ್ ಗಳಿಗೆ ವಿದಾಯ ಹೇಳಿ. ಹೊಸ ಲೈಟ್ ಗೆ ಹೊಂದಿಕೊಳ್ಳುವ, ಬಿಳಿ ಇಲ್ಲವೇ ಲೈಟ್ ಬಣ್ಣದ ಕರ್ಟನ್ ಗಳು ಮನೆಗೆ ವಿಭಿನ್ನ ಲುಕ್ ನೀಡುವ ಜೊತೆಗೆ ನಿಮ್ಮ ಮನಸ್ಸನ್ನೂ ಫ್ರೆಶ್ ಆಗಿಸುತ್ತವೆ.
ಅನಗತ್ಯ ವಸ್ತುಗಳನ್ನು ಮೊದಲು ಹೊರಗೆಸೆಯಿರಿ. ಅಸ್ತವ್ಯಸ್ತವಾಗಿ ಎಲ್ಲವನ್ನೂ ಇಟ್ಟುಕೊಳ್ಳುವ ಬದಲು ಬೇಕಿದ್ದನ್ನು ಮಾತ್ರ ಇಟ್ಟುಕೊಂಡು, ಅಗತ್ಯವಿಲ್ಲದ ವಸ್ತುಗಳಿಗೆ ವಿದಾಯ ಹೇಳಿ. ಇದರಿಂದ ಹೆಚ್ಚುವರಿ ಜಾಗ ನಿಮಗೆ ಸಿಗುತ್ತದೆ.
ಮನಸ್ಸಿಗೆ ಮುದ ನೀಡುವ, ಯಾವುದೇ ಉಪದ್ರ ಕೊಡದ ಹಸಿರು ಸಸ್ಯಗಳಿಗೆ ಮನೆಯೊಳಗೆ ಜಾಗ ಕೊಡಿ. ಇವು ಮನಸ್ಸಿಗೆ ಶಾಂತಿ ನೀಡುತ್ತವೆ. ಪರಿಸರವನ್ನು ತಾಜಾವಾಗಿಡುತ್ತದೆ. ಮನೆಯೊಳಗೆ ಬೆಳೆಸುವ ಗಿಡಗಳ ಬಗ್ಗೆ ತಿಳಿದು ತನ್ನಿ.