ಸ್ವಚ್ಛವಾದ, ಎಲ್ಲವೂ ಚೆನ್ನಾಗಿ ಜೋಡಿಸಿ, ನೀಟಾಗಿಟ್ಟ ಮನೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮನೆ ಕ್ಲೀನ್ ಇದ್ದರೆ ಮನಸ್ಸಿಗೂ ನೆಮ್ಮದಿಯಾಗುತ್ತದೆ. ಆದರೆ ಆಫೀಸ್ ಗೆ ಹೋಗುವ ಗಡಿಬಿಡಿ, ಕೆಲವೊಮ್ಮೆ ಯಾರು ಇದೆಲ್ಲಾ ಮಾಡುತ್ತಾರೆ ಎಂಬ ಸೋಮಾರಿತನದಿಂದ ಮನೆಯ ಸಾಮಾನುಗಳು, ಬಟ್ಟೆಗಳು ಎಲ್ಲೆಂದರಲ್ಲಿ ಬಿದ್ದಿರುತ್ತದೆ. ಇದನ್ನು ನೋಡುವುದಕ್ಕೂ ಒಂದು ರೀತಿ ಕಿರಿಕಿರಿಯಾಗುತ್ತದೆ.
ಇನ್ನು ಮನೆಯಲ್ಲಿ ಮಕ್ಕಳು ಇದ್ದರಂತೂ ಕೇಳುವುದೇ ಬೇಡ. ಅವರ ಆಟದ ಸಾಮಾನು, ಗೊಂಬೆ, ತಿಂದು ಬಿಟ್ಟ ಪ್ಲೇಟ್, ಚೆಲ್ಲಿದ ತಿಂಡಿ ಹೀಗೆ ಎಷ್ಟೇ ಗುಡಿಸಿ, ಒರೆಸಿದರೂ ಗಲೀಜಾಗಿರುತ್ತದೆ. ಯಾರಾದರೂ ಮನೆಗೆ ಬಂದರೆ ಇವರೇನು ಮನೆ ಕ್ಲೀನೇ ಮಾಡಿಲ್ಲವೇನೋ ಅನಿಸುತ್ತದೆ.
ಹಾಗಾಗಿ ಮನೆಯಲ್ಲಿ ಸಿಕ್ಕಾಪಟ್ಟೆ ವಸ್ತುಗಳನ್ನು ತಂದು ರಾಶಿ ಹಾಕಿಕೊಳ್ಳಬೇಡಿ. ಇನ್ನು ಮಕ್ಕಳ ಆಟದ ಸಾಮಾನುಗಳನ್ನು ಒಂದು ಡಬ್ಬಕ್ಕೆ ತುಂಬಿಸಿ ಪಕ್ಕಕ್ಕಿಡಿ. ಮಕ್ಕಳಿಗೆ ಆಟ ಆಡಿದ ಮೇಲೆ ಅವರ ವಸ್ತುಗಳನ್ನು ಡಬ್ಬಕ್ಕೆ ತುಂಬಿಸುವುದಕ್ಕೆ ಹೇಳಿ. ಇದರಿಂದ ನಿಮಗೂ ಕೆಲಸ ಹೊರೆ ಕಡಿಮೆಯಾಗುತ್ತದೆ.
ಇನ್ನು ಟವೆಲ್, ಪುಸ್ತಕ ಎಲ್ಲವನ್ನೂ ಬಳಸಿದ ಮೇಲೆ ಅವುಗಳು ಇಡುವ ಜಾಗದಲ್ಲಿಯೇ ಇಡಬೇಕು ಎಂಬ ತಾಕೀತು ಮಾಡಿ. ಆಗ ಮನೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿ ಆಗುವುದು ತಪ್ಪುತ್ತದೆ.
ಆದಷ್ಟು ವಸ್ತುಗಳು ಕಡಿಮೆ ಇದ್ದರೆ ಒಳ್ಳೆಯದು. ಎಲ್ಲವನ್ನೂ ಅದರದ್ದೇ ಆದ ಜಾಗದಲ್ಲಿ ಇಟ್ಟರೆ ಮನಸ್ಸಿಗೂ ನೆಮ್ಮದಿ ಕೆಲಸವೂ ಕಡಿಮೆ.