ಮನೆ ಕ್ಲೀನ್ ಆಗಿದ್ದರೆ ಮನಸ್ಸು ಕೂಡ ನಿರಾಳವಾಗುತ್ತದೆ. ಆದರೆ ಕೆಲವೊಮ್ಮೆ ಮನೆಯನ್ನು ಎಷ್ಟೇ ಕ್ಲೀನ್ ಆಗಿ ಇಟ್ಟುಕೊಂಡರೂ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಹರಡಿ ಒಂದು ರೀತಿ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಟಿಪ್ಸ್.
ಬಟ್ಟೆಗಳನ್ನು ಸರಿ ಮಾಡಿ ಇಡುವುದು ದೊಡ್ಡ ತಲೆನೋವಿನ ಕೆಲಸ ಎನ್ನಬಹುದು. ಹಾಗಾಗಿ ಬಟ್ಟೆ ವಾಶ್ ಮಾಡಿ ಒಣಗಿಸಿದ ಬಳಿಕ ಮಡಚಿ ಆಯಾಯ ಬಟ್ಟೆಗಳನ್ನು ಎಲ್ಲೆಲ್ಲಿ ಇಡಬೇಕೋ ಅಲ್ಲಿ ಇಡಿ. ಕೆಲವೊಮ್ಮೆ ನಾಳೆ ಮಡಚಿ ಇಟ್ಟರೆ ಆಯ್ತು ಎಂದು ಸುಮ್ಮನಾಗಿ ಬಿಡುತ್ತೇವೆ. ಆಮೇಲೆ ದೊಡ್ಡ ರಾಶಿಯೇ ಆಗಿ ಕೆಲಸ ಮತ್ತಷ್ಟೂ ಹೆಚ್ಚುತ್ತದೆ.
ಇನ್ನು ದಿನ ನಿತ್ಯದ ಉಪಯೋಗಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಹೊರಗಡೆ ಎತ್ತಿಡಿ. ಮಕ್ಕಳು ಮನೆಯಲ್ಲಿದ್ದರೆ ಅವರ ಬಟ್ಟೆಯನ್ನು ಅವರ ಬಳಿ ಮಡಚಿ ಇಡುವುದಕ್ಕೆ ಹೇಳಿ. ಅವರು ಮಾಡುವ ಸಣ್ಣ ಕೆಲಸ ಕೂಡ ನಿಮಗೆ ಸಹಾಯವಾಗುತ್ತದೆ.
ಅಡುಗೆಯ ಮನೆಯಲ್ಲಿ ತುಂಬಿರುವ ಪಾತ್ರೆಗಳು ಕೂಡ ಮನಸ್ಸಿನ ನೆಮ್ಮದಿ ಮೇಲೆ ಪರಿಣಾಮ ಬೀರುತ್ತದೆ. ಮನೆಯಲ್ಲಿ ಎಷ್ಟು ಜನರಿದ್ದರೋ ಅಷ್ಟು ಜನಕ್ಕೆ ಮಾತ್ರ ತಟ್ಟೆ, ಲೋಟ ತೆಗೆದಿಟ್ಟುಕೊಳ್ಳಿ. ಆದಷ್ಟು ಕಡಿಮೆ ಪಾತ್ರೆ ಬಳಸಿ ಅಡುಗೆ ಮಾಡುವುದಕ್ಕೆ ಪ್ರಯತ್ನಿಸಿ. ಇಲ್ಲದಿದ್ದರೆ ಸಿಂಕ್ ತುಂಬಾ ಪಾತ್ರೆ ತುಂಬಿ ಅದನ್ನು ಕ್ಲೀನ್ ಮಾಡುವ ಕೆಲಸ ಹೆಚ್ಚಾಗುತ್ತದೆ.
ಮಕ್ಕಳ ಆಟದ ಸಾಮಾನು, ಪುಸ್ತಕಗಳನ್ನು ಒಂದು ಬಾಕ್ಸ್ ಒಳಗೆ ಎತ್ತಿಡಿ. ಆಟ ಆಡಿದ ಬಳಿಕ ಅವರ ಬಳಿ ಅದನ್ನು ಕ್ಲೀನ್ ಮಾಡುವುದಕ್ಕೆ ಹೇಳಿ. ಆಗ ಮನೆಯೂ ಕ್ಲೀನ್ ಆಗುತ್ತದೆ. ಮನಸ್ಸು ನಿರಾಳವಾಗುತ್ತದೆ.