ಲಕ್ನೋ: ಮನೆಗಳಲ್ಲಿ ನಗದು, ಚಿನ್ನಾಭರಣವನ್ನಿಟ್ಟರೆ ಕಳ್ಳರು ಕದಿಯುತ್ತಾರೆ ಎಂಬ ಭಯವಿರುತ್ತದೆ. ಹೀಗಾಗಿ ಹೆಚ್ಚಿನ ಜನರು ಬ್ಯಾಂಕ್ ಲಾಕರ್ ನಲ್ಲಿಡುತ್ತಾರೆ. ಆದರೆ, ಇಲ್ಲೊಂದೆಡೆ ಖದೀಮರು ಮನೆಯಲ್ಲಿದ್ದ ಟ್ಯಾಪ್‌ಗಳು ಮತ್ತು ಒಳಚರಂಡಿ ಮುಚ್ಚಳಗಳನ್ನು ಕದ್ದಿದ್ದು, ನಿವಾಸಿಗಳನ್ನು ಬೆಚ್ಚಿಬೀಳಿಸಿದೆ.
ಯುಪಿಯ ಲಕ್ನೋದ ಇಂದಿರಾ ನಗರದಲ್ಲಿ ಈ ಘಟನೆ ನಡೆದಿದೆ. ಸುಮಾರು ಅರ್ಧ ಡಜನ್ ಮನೆಗಳಲ್ಲಿ ಟ್ಯಾಪ್‌ಗಳು ಮತ್ತು ಒಳಚರಂಡಿ ಮುಚ್ಚಳಗಳನ್ನು ಖದೀಮರು ಕಳವುಗೈದಿದ್ದಾರೆ. ಸ್ನಾನಗೃಹಗಳಿಗೆ ಪ್ರವೇಶಿಸಿದ ಕಳ್ಳರು ನಳ್ಳಿಗಳನ್ನು ತೆಗೆದಿದ್ದಾರೆ. ನಳ್ಳಿಗಳು ಹಾಗೂ ಒಳಚರಂಡಿ ಮುಚ್ಚಳಗಳನ್ನು ಬಿಟ್ಟು ಬೇರೆ ಏನನ್ನೂ ಅವರು ಒಯ್ದಿಲ್ಲ. ಈ ರೀತಿಯ ಕಳ್ಳತನದ ಹಿಂದಿನ ಉದ್ದೇಶವನ್ನು ಅರ್ಥಮಾಡಿಕೊಳ್ಳಲು ವಿಫಲರಾಗಿದ್ದಾಗಿ ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಒಳಚರಂಡಿ ಮುಚ್ಚಳಗಳು ಕಳ್ಳತನವಾಗುವುದು ಸಾಮಾನ್ಯ. ಆದರೆ, ನಳ್ಳಿಗಳು ಕಳ್ಳತನವಾಗಿರುವುದು ಮಾತ್ರ ಇದೇ ಮೊದಲು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚಾಗಿ ಮಾದಕ ವ್ಯಸನಿಗಳು ಒಳಚರಂಡಿ ಮುಚ್ಚಳಗಳನ್ನು ಕದ್ದು ಅವುಗಳನ್ನು ಸ್ಕ್ರ್ಯಾಪ್ ಡೀಲರ್‌ಗಳಿಗೆ ಮಾರಾಟ ಮಾಡುತ್ತಾರೆ. ಆದರೆ, ನಳ್ಳಿಗಳನ್ನು ಕದಿಯುವ ಹಿಂದಿನ ಕಾರಣ ಅರ್ಥವಾಗುತ್ತಿಲ್ಲ ಎಂದು ಪೊಲೀಸರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಶುರುವಾಗಿದೆ. ಪ್ರಾಥಮಿಕವಾಗಿ, ಕೆಲವು ಮಾದಕ ವ್ಯಸನಿಗಳು ಕಳವು ಮಾಡಿದ್ದಾರೆ ಎಂದು ತೋರುತ್ತಿದೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.