ಆರೋಗ್ಯ ಚೆನ್ನಾಗಿರಬೇಕೆಂದರೆ ದಿನಕ್ಕೆ ಕನಿಷ್ಟ 7 ರಿಂದ 9 ಗಂಟೆಗಳ ನಿದ್ರೆ ಅವಶ್ಯಕ. ಚೆನ್ನಾಗಿ ನಿದ್ದೆ ಮಾಡಿದ್ರೆ ದೇಹದ ಜೀವಕೋಶಗಳು ವಿಶ್ರಾಂತಿ ಪಡೆಯುತ್ತವೆ. ಮತ್ತೆ ಕೆಲಸ ಮಾಡಲು ತ್ವರಿತವಾಗಿ ಸಕ್ರಿಯವಾಗುತ್ತವೆ.
ನಿದ್ದೆಯ ಕೊರತೆಯಿಂದ ದಿನವಿಡೀ ದೇಹದಲ್ಲಿ ಸೋಮಾರಿತನ ಕಾಡುತ್ತದೆ. ಮನಸ್ಸು ಕೆಲಸದಲ್ಲಿ ತೊಡಗುವುದೇ ಇಲ್ಲ. ನಿದ್ರೆಯ ಕೊರತೆಯಿಂದಾಗಿ ವ್ಯಕ್ತಿಯು ಖಿನ್ನತೆಗೆ ಬಲಿಯಾಗುತ್ತಾನೆ. ಒಬ್ಬ ವ್ಯಕ್ತಿಯು ನಿದ್ದೆ ಮಾಡದೆ ಎಷ್ಟು ದಿನ ಬದುಕಬಹುದು ಅನ್ನೋದನ್ನು ಎಂದಾದರೂ ಯೋಚಿಸಿದ್ದೀರಾ? ಆರೋಗ್ಯಕರ ದೇಹಕ್ಕೆ ಆಹಾರ, ನೀರು ಮತ್ತು ಗಾಳಿಯ ಅಗತ್ಯವಿದೆ. ಅದೇ ರೀತಿ ಉತ್ತಮ ನಿದ್ರೆ ಕೂಡ ಅಷ್ಟೇ ಮುಖ್ಯ.
1997 ರಲ್ಲಿ ನಿದ್ರೆಯ ಬಗ್ಗೆ ಸಂಶೋಧನೆ ನಡೆಸಲಾಯಿತು. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಆಯೋಜಿಸಿದ್ದ ಸ್ಪರ್ಧೆಯಲ್ಲಿ 18 ದಿನ, 21 ಗಂಟೆ 40 ನಿಮಿಷಗಳ ಕಾಲ ನಿರಂತರವಾಗಿ ನಿದ್ದೆ ಮಾಡದೇ ಇರುವ ದಾಖಲೆಯಿದೆ. ಆದಾಗ್ಯೂ ಈ ದಾಖಲೆಯಿಂದಾಗಿ ದೇಹದ ಮೇಲೆ ಅನೇಕ ರೀತಿಯ ಅಡ್ಡಪರಿಣಾಮಗಳು ಕಂಡುಬಂದವು. ನಂತರ ಇದನ್ನು ಗಿನ್ನಿಸ್ ದಾಖಲೆಯಿಂದ ತೆಗೆದು ಹಾಕಲಾಯ್ತು.
ನಿದ್ರೆಯ ಅಭಾವದ ದುಷ್ಪರಿಣಾಮಗಳು
ರಾತ್ರಿ ಸರಿಯಾಗಿ ನಿದ್ದೆ ಮಾಡದಿದ್ದರೆ ಅದರಿಂದ ದೇಹದ ಮೇಲೆ ಅನೇಕ ರೀತಿಯ ದುಷ್ಪರಿಣಾಮಗಳಾಗುತ್ತವೆ. ನಿದ್ರೆಯ ಕೊರತೆಯಿಂದಾಗಿ ದೇಹದ ಶಕ್ತಿಯು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆಗಾಗ ತಲೆನೋವು ಬರುತ್ತದೆ. ಸ್ನಾಯುಗಳು ದಣಿಯುತ್ತವೆ, ತೂಕ ಹೆಚ್ಚಾಗಲು ಪ್ರಾರಂಭಿಸುತ್ತದೆ. ನಿದ್ದೆಯ ಕೊರತೆಯಿಂದ ಅಧಿಕ ರಕ್ತದೊತ್ತಡ ಕೂಡ ಕಾಣಿಸಿಕೊಳ್ಳಬಹುದು.
ಇದರ ಹೊರತಾಗಿ ಅತಿದೊಡ್ಡ ಮತ್ತು ಅಪಾಯಕಾರಿ ಸಮಸ್ಯೆಯೆಂದರೆ ದೇಹದ ಸಮತೋಲನವು ಹದಗೆಡಲು ಪ್ರಾರಂಭಿಸುತ್ತದೆ. ಸುಮಾರು 19 ದಿನಗಳ ಕಾಲ ನಿದ್ದೆಯಿಲ್ಲದೇ ಬದುಕಬಹುದು ಅನ್ನೋದು ಸಾಬೀತಾಗಿದೆ. ಆದ್ರೆ ಇದು ಅತ್ಯಂತ ಅಪಾಯಕಾರಿ ಅನ್ನೋದು ಕೂಡ ದೃಢಪಟ್ಟಿದೆ.