2023 – 24ನೇ ಸಾಲಿನ ಶೈಕ್ಷಣಿಕ ವರ್ಷ ಮೇ 29 ರಿಂದ ಆರಂಭವಾಗುತ್ತಿದ್ದು, ಇದಕ್ಕೆ ಪೂರ್ವಭಾವಿಯಾಗಿ ಶಿಕ್ಷಣ ಇಲಾಖೆ ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ಶಾಲಾರಂಭದ ಮೊದಲ ದಿನವೇ ಸಮವಸ್ತ್ರ ಲಭಿಸುವಂತೆ ನೋಡಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ಈಗಾಗಲೇ ಅಗತ್ಯ ಸೂಚನೆಗಳನ್ನು ನೀಡಲಾಗಿದೆ.
ಇದರ ಜೊತೆಗೆ ಮಧ್ಯಾಹ್ನದ ಬಿಸಿಯೂಟ ಹಾಗೂ ಕ್ಷೀರ ಭಾಗ್ಯ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೆಲವೊಂದು ಸೂಚನೆಗಳನ್ನು ನೀಡಲಾಗಿದ್ದು, ಶಾಲಾ ಆರಂಭೋತ್ಸವದ ದಿನದಂದು ಸಿಹಿ ಹಂಚಿಕೆಯೊಂದಿಗೆ ಬಿಸಿಯೂಟ ನೀಡಬೇಕೆಂದು ತಿಳಿಸಲಾಗಿದೆ.
ಮಧ್ಯಾಹ್ನದ ಬಿಸಿಯೂಟದಲ್ಲಿ ಸ್ವಚ್ಛತೆ, ನೈರ್ಮಲ್ಯ, ಗುಣಮಟ್ಟ, ನಿಗದಿತ ಪ್ರಮಾಣ, ಪೌಷ್ಟಿಕತೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ತಿಳಿಸಲಾಗಿದ್ದು, ಗುಣಮಟ್ಟ ಹಾಳಾಗಿರುವ ಮತ್ತು ಕೊಳೆತ ಆಹಾರ ಪದಾರ್ಥಗಳನ್ನು ದಾಸ್ತಾನಿನಿಂದ ಬೇರ್ಪಡಿಸಿ ಹೊರಹಾಕುವಂತೆ ಸೂಚಿಸಲಾಗಿದೆ. ಅಲ್ಲದೆ ಅವಧಿ ಮುಗಿದಿರುವ ಪದಾರ್ಥಗಳನ್ನು ಬಿಸಿಯೂಟಕ್ಕೆ ಬಳಸಬಾರದು ಎಂದು ಸೂಚನೆ ನೀಡಲಾಗಿದೆ.
ಅಡುಗೆ ಸಿಬ್ಬಂದಿ 60 ವರ್ಷ ಪೂರ್ಣಗೊಳಿಸಿ ನಿವೃತ್ತಿ ಹೊಂದಿದ್ದ ಸಂದರ್ಭದಲ್ಲಿ ಅವರ ಸ್ಥಾನಕ್ಕೆ ಶಾಲಾ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೊಸ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು ಎಂದು ತಿಳಿಸಲಾಗಿದ್ದು, ಅವರ ಮಾಸಿಕ ವೇತನ ಬಿಡುಗಡೆಗಾಗಿ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.