ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ವೇಳಾಪಟ್ಟಿಯಲ್ಲಿ ಮಹತ್ವದ ಮಾರ್ಪಾಡು ಮಾಡಲಾಗಿದ್ದು, ಇದರ ವಿವರ ಇಲ್ಲಿದೆ. ಏಕಕಾಲದಲ್ಲಿ ಮಕ್ಕಳ ದಟ್ಟಣೆ ಆಗುವುದನ್ನು ತಡೆಗಟ್ಟುವ ಸಲುವಾಗಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸಮಯವನ್ನು ನಿಗದಿಪಡಿಸಲಾಗಿದೆ.
ಈ ವೇಳಾಪಟ್ಟಿ ಅನ್ವಯ 1ರಿಂದ 5ನೇ ತರಗತಿ ವಿದ್ಯಾರ್ಥಿಗಳು ಮಧ್ಯಾಹ್ನ 1 ಗಂಟೆಯಿಂದ 1.45 ರ ವರೆಗೆ ಬಿಸಿಯೂಟ ಸ್ವೀಕರಿಸಲಿದ್ದರೆ, 6 ರಿಂದ 10 ನೇ ತರಗತಿ ವಿದ್ಯಾರ್ಥಿಗಳು ಮಧ್ಯಾಹ್ನ 2 ರಿಂದ 2.40 ರ ವರೆಗೆ ಬಿಸಿಯೂಟ ಸ್ವೀಕರಿಸಲಿದ್ದಾರೆ. ಅಲ್ಲದೆ ಮಕ್ಕಳಿಗೆ ಆಹಾರ ನೀಡಲು ಸ್ಟೀಲ್ ತಟ್ಟೆ ಮತ್ತು ಲೋಟಗಳನ್ನೇ ಬಳಸಬೇಕು ಎಂದು ಸೂಚಿಸಲಾಗಿದೆ.
ಆಹಾರ ತಯಾರಿಕಾ ವೇಳೆ ಶುಚಿತ್ವ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಸಿಬ್ಬಂದಿ ತಲೆಗವಸು ಹಾಗೂ ಹತ್ತಿ ಬಟ್ಟೆಯಿಂದ ತಯಾರಿಸಿದ ಎಪ್ರಾನ್ ಧರಿಸಬೇಕು ಎಂದು ತಿಳಿಸಲಾಗಿದೆ. ಅಲ್ಲದೆ ಸೊಪ್ಪು ಮತ್ತು ತರಕಾರಿಗಳನ್ನು ಶುದ್ಧ ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸಿ ಬಳಸಬೇಕು ಎಂದು ಸೂಚಿಸಲಾಗಿದೆ.