ಅಧಿಕೃತ ಕಾರ್ಯನಿಮಿತ್ತ ಪರ ಊರಿಗೆ ತೆರಳಿದ್ದ ಇಬ್ಬರು ಯುವತಿಯರು ಹೋಟೆಲ್ ರೂಮಿನಲ್ಲಿ ತಂಗಿದ್ದ ವೇಳೆ ಮಧ್ಯರಾತ್ರಿ ಎಚ್ಚರಗೊಂಡು ಬೆಚ್ಚಿಬಿದ್ದಿದ್ದಾರೆ. ಇವರ ಪಕ್ಕದಲ್ಲಿಯೇ ಹೋಟೆಲ್ ವೇಯ್ಟರ್ ಮಲಗಿಕೊಂಡಿದ್ದು, ಇದೀಗ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಂಥದೊಂದು ವಿಲಕ್ಷಣ ಘಟನೆ ಮಧ್ಯಪ್ರದೇಶದ ಕಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ. ಭೋಪಾಲ್ ಮೂಲದ ಈ ಇಬ್ಬರು ಯುವತಿಯರು ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅಧಿಕೃತ ಕಾರ್ಯ ನಿಮಿತ್ತ ಕಾಂಡ್ವಾಗೆ ಆಗಮಿಸಿದ್ದರು. ಅಲ್ಲಿನ ಸಿವಿಲ್ ಲೈನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹೋಟೆಲ್ ರಂಜಿತ್ ನಲ್ಲಿ ಇವರು ತಂಗಿದ್ದು, ರಾತ್ರಿ ಊಟವಾದ ನಂತರ ರೂಮಿಗೆ ತೆರಳಿ ಮಲಗಿದ್ದಾರೆ.
ಮಧ್ಯರಾತ್ರಿ ಇವರುಗಳಿಗೆ ಎಚ್ಚರವಾಗಿದ್ದು, ಪಕ್ಕದಲ್ಲಿ ಪರ ಪುರುಷನೊಬ್ಬ ಮಲಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕಿರುಚಿಕೊಂಡು ಲೈಟ್ ಆನ್ ಮಾಡಿದಾಗ ಆತ ಪರಾರಿಯಾಗಿದ್ದಾನೆ. ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅವರುಗಳು ಹೋಟೆಲ್ ಸಿಬ್ಬಂದಿಯನ್ನು ಸಾಲಿನಲ್ಲಿ ನಿಲ್ಲಿಸಿ ಗುರುತಿಸಲು ಹೇಳಿದಾಗ ಆರೋಪಿ 22 ವರ್ಷದ ಬಲಿರಾಮ್ ಪಾಟೀಲ್ ಸಿಕ್ಕಿ ಬಿದ್ದಿದ್ದಾನೆ.
ಈತ ಭಾನುವಾರ ಮಧ್ಯರಾತ್ರಿ ಕಿಟಕಿ ಮೂಲಕ ಯುವತಿಯರು ಇದ್ದ ರೂಮಿಗೆ ಪ್ರವೇಶಿಸಿದ್ದ ಎನ್ನಲಾಗಿದ್ದು, ಲೈಂಗಿಕ ಕಿರುಕುಳ ನೀಡಿದ್ದಾನೆ. ಈಗ ಆತನ ವಿರುದ್ಧ ಐಪಿಸಿ ಕಲಂ 354 ಹಾಗೂ 458ರ ಅಡಿ ಲೈಂಗಿಕ ಕಿರುಕುಳ ಮತ್ತು ಅತಿಕ್ರಮ ಪ್ರವೇಶದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.