ತಮ್ಮ ಪುತ್ರ ಪ್ರಶಾಂತ್ ಅವರ ಬೆಂಗಳೂರಿನ ಕಚೇರಿ ಹಾಗೂ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಕೋಟ್ಯಾಂತರ ರೂಪಾಯಿ ವಶಪಡಿಸಿಕೊಂಡ ಬಳಿಕ ದಾವಣಗೆರೆ ಜಿಲ್ಲೆ, ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೂ ಬಂಧನದ ಭೀತಿ ಎದುರಾಗಿದ್ದು, ಹೈಕೋರ್ಟ್ ನೀಡಿರುವ ಆದೇಶದಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಹೈಕೋರ್ಟ್ ನ್ಯಾಯಮೂರ್ತಿ ನಟರಾಜನ್ ಅವರನ್ನು ಒಳಗೊಂಡ ಏಕ ಸದಸ್ಯ ಪೀಠ, ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಇಬ್ಬರ ಶ್ಯೂರಿಟಿಯೊಂದಿಗೆ 5 ಲಕ್ಷ ರೂಪಾಯಿ ಬಾಂಡ್ ನೀಡುವಂತೆ ಸೂಚಿಸಿದೆ. ಹೀಗಾಗಿ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಂಧನಕ್ಕೊಳಗಾಗಿ ಮುಜುಗರದ ಪರಿಸ್ಥಿತಿ ಎದುರಿಸುವ ಸಂದರ್ಭದಿಂದ ಮಾಡಾಳ್ ವಿರೂಪಾಕ್ಷಪ್ಪ ಪಾರಾಗಿದ್ದಾರೆ.
ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಮಧ್ಯಂತರ ಜಾಮೀನು ಸಿಕ್ಕ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಡೊಳ್ಳಿನ ಸದ್ದಿಗೆ ಕುಣಿಯುತ್ತ ಅವರುಗಳು ಸಂಭ್ರಮಾಚರಣೆ ಮಾಡಿದ್ದಾರೆ. ಇದರ ಮಧ್ಯೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ತಮ್ಮ ತವರು ಚನ್ನಗಿರಿ ತಾಲೂಕಿನ ಚನ್ನೇಶಪುರಕ್ಕೆ ತೆರಳುತ್ತಿದ್ದು, ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ಸಾಧ್ಯತೆ ಇದೆ.