ಕಾಸರಗೋಡು ನಗರದಿಂದ ಸುಮಾರು 7 ಕಿಲೋಮಿಟರ್ ದೂರದಲ್ಲಿರುವ ಮಧೂರು ದೇವಸ್ಥಾನದಲ್ಲಿ ಶಿವ ಹಾಗೂ ಗಣಪತಿ ಮೂಲ ಆರಾಧನಾ ದೇವತೆಗಳು. ಇಲ್ಲಿನ ಶಿವ ಮಧೂರು ಮದನಂತೇಶ್ವರನೆಂದೇ ಪ್ರಸಿದ್ಧ. ಹಿಂದಿನಿಂದ ನೋಡಿದರೆ ದೇವಸ್ಥಾನವು ಆನೆಯ ಹಿಂಭಾಗದಂತೆ ಕಾಣುತ್ತದೆ.
ರಾಮಾಯಣದ ಕಥೆಯ ಕೆತ್ತನೆಗಳನ್ನೂ ಇಲ್ಲಿ ಕಾಣಬಹುದು. ಮಧುವಾಹಿನಿ ನದಿಯು, ದೇವಸ್ಥಾನದ ಮುಂಭಾಗದಲ್ಲಿ ಹರಿಯುತ್ತದೆ. ಸುತ್ತಲೂ ಹಚ್ಚ ಹಸಿರಿದೆ. ಮಳೆಗಾಲದಲ್ಲಿ ದೇವಸ್ಥಾನದ ಒಳಭಾಗಕ್ಕೆ ನದಿಯ ನೀರು ಹರಿದು ಬರುತ್ತದೆ. ಶ್ರೀ ಗಜಮುಖನ ಸೊಂಡಿಲು ಬಲಗಡೆಗೆ ಬಾಗಿದ್ದು “ಬಲಮುರಿ ಗಣಪತಿ” ಎಂದು ಇದು ಪ್ರಸಿದ್ದವಾಗಿದೆ.
ಇದಲ್ಲದೆ ಸುಬ್ರಹ್ಮಣ್ಯ, ಆಯ್ಯಪ್ಪ, ದುರ್ಗಾ ಪರಮೇಶ್ವರಿ ದೇವರ ಗುಡಿಗಳಿವೆ. ಕಾಸರಗೋಡಿನ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಇದು ಒಂದು. ಭಕ್ತಾದಿಗಳು ಹೆಚ್ಚಾಗಿ ಉದಯಾಸ್ತಮಾನ ಪೂಜೆಯನ್ನು ಮಾಡಿಸುತ್ತಾರೆ. ‘ಅಪ್ಪ ಪ್ರಸಾದ’ವು ಇಲ್ಲಿನ ಮುಖ್ಯ ಪ್ರಸಾದ.