ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇಂದು ಸಾಮಾನ್ಯವಾಗಿದೆ. ಒತ್ತಡದ ಜೀವನ, ಆಹಾರ ಅಭ್ಯಾಸ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಒಮ್ಮೆ ಮಧುಮೇಹಕ್ಕೆ ತುತ್ತಾದರೆ ಜೀವನ ಪರ್ಯಂತ ಮಾತ್ರೆ ಸೇವಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.
ಮಧುಮೇಹ ರೋಗಿಗಳು ಸೇವಿಸುವ ‘ಸಿಟಾಗ್ಲಿಫ್ಟಿನ್’ ಎಂಬ ಮಾತ್ರೆಯನ್ನು ಶುಕ್ರವಾರದಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಕೇವಲ ಅರವತ್ತು ರೂಪಾಯಿಗಳಿಗೆ 10 ಮಾತ್ರೆಗಳ ಪ್ಯಾಕ್ ನಲ್ಲಿ ದೊರೆಯಲಿದೆ.
ಭಾರತೀಯ ಔಷಧ ಮತ್ತು ವೈದ್ಯಕೀಯ ಸಲಕರಣೆಗಳ ಸಂಸ್ಥೆ ಈ ಔಷಧವನ್ನು ಬಿಡುಗಡೆ ಮಾಡಿದ್ದು, 50 ಎಂಜಿ ಮತ್ತು 100 ಎಂಜಿ ಡೋಸ್ ಗಳಲ್ಲಿ ಇದು ದೊರೆಯಲಿದೆ.
ಸಿಟಾಗ್ಲಿಫ್ಟಿನ್ ಫಾಸ್ಫೇಟ್ 50 ಎಂಜಿ ಮಾತ್ರೆಯ ಹತ್ತು ಮಾತ್ರೆಗಳಿಗೆ 60 ರೂಪಾಯಿಗಳಾಗಿದ್ದರೆ, 100 ಎಂಜಿ 10 ಮಾತ್ರೆಗಳಿಗೆ ನೂರು ರೂಪಾಯಿಗಳಾಗಿದೆ. ಇವುಗಳು ಎಲ್ಲಾ ಜನೌಷಧ ಕೇಂದ್ರಗಳಲ್ಲಿ ಲಭ್ಯವಿರಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ತಿಳಿಸಿದೆ.