ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಅನ್ನೋದು ಎಲ್ರಿಗೂ ತಿಳಿದಿದೆ. ಸಾಮಾನ್ಯವಾಗಿ ಪ್ರತಿಯೊಂದು ದೇಶಗಳಲ್ಲೂ ಮದ್ಯಪಾನದಿಂದಾಗುವ ಅಪಾಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸರ್ಕಾರಗಳು ಮದ್ಯಪಾನ ತಡೆಯಲು ಯೋಜನೆ ರೂಪಿಸುತ್ತವೆ. ಆದ್ರೆ ಜನರು ಮದ್ಯಸೇವನೆ ಕಡಿಮೆ ಮಾಡಿರೋದ್ರಿಂದ ಇಲ್ಲೊಂದು ದೇಶ ತೊಂದರೆಗೆ ಸಿಲುಕಿದೆ.
ಮದ್ಯ ಸೇವನೆ ಕಡಿಮೆಯಾಗಿದ್ದರಿಂದ ಜಪಾನ್ ದೇಶದ ಆದಾಯ ಕುಸಿದಿದೆ. ಹಾಗಾಗಿ ಜನರಿಗೆ ಹೆಚ್ಹೆಚ್ಚು ಮದ್ಯಪಾನ ಮಾಡಲು ಜಪಾನ್ ಪ್ರೋತ್ಸಾಹಿಸುತ್ತಿದೆ. ಇದಕ್ಕಾಗಿ ಸರ್ಕಾರ ರಾಷ್ಟ್ರಮಟ್ಟದ ಸ್ಪರ್ಧೆಯನ್ನೂ ಆರಂಭಿಸಿದೆ. ಹೆಚ್ಚು ಆಲ್ಕೋಹಾಲ್ ಸೇವಿಸುವಂತೆ ಜನರನ್ನು ಉತ್ತೇಜಿಸಲು ಜಪಾನ್ ಸರ್ಕಾರ ‘ದಿ ಸೇಕ್ ವಿವಾ! ಕ್ಯಾಂಪೇನ್’ ಎಂಬ ಅಭಿಯಾನವನ್ನು ನಡೆಸುತ್ತಿದೆ.
ನ್ಯಾಷನಲ್ ಟ್ಯಾಕ್ಸ್ ಏಜೆನ್ಸಿ (NTA) ನಡೆಸುತ್ತಿರುವ ಈ ಸ್ಪರ್ಧೆಯು 20-39 ವಯಸ್ಸಿನ ಜನರನ್ನು ಮದ್ಯದ ಜನಪ್ರಿಯತೆಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುವ ಪ್ಲಾನ್‌ಗಳೊಂದಿಗೆ ಬರುವಂತೆ ಸೂಚಿಸುತ್ತದೆ. ಈ ಸ್ಪರ್ಧೆ ಸೆಪ್ಟೆಂಬರ್ 9 ರವರೆಗೆ ನಡೆಯಲಿದೆ. ಇದರಲ್ಲಿ ಹೊಸ ಉತ್ಪನ್ನ ಮಾತ್ರವಲ್ಲದೆ ಹಳೆಯ ಉತ್ಪನ್ನದ ಬಳಕೆಯನ್ನು ಹೆಚ್ಚಿಸುವಂತೆ ಕೇಳಲಾಗುತ್ತಿದೆ. ಈ ಮೂಲಕ ಮನೆಯಲ್ಲಿ ಕುಡಿಯುವ ಪ್ರವೃತ್ತಿಯನ್ನು ಹೆಚ್ಚಿಸಬಹುದು ಎಂಬುದು ಸರ್ಕಾರದ ಲೆಕ್ಕಾಚಾರ. ಇದೆಲ್ಲವನ್ನೂ ಪ್ರಚಾರ ಮಾಡಲು ಸ್ಪರ್ಧಿಗಳಿಂದ ಹೊಸ ಐಡಿಯಾಗಳನ್ನು ಕೇಳಲಾಗುತ್ತದೆ.
1995ರಲ್ಲಿ ಜಪಾನ್‌ನಲ್ಲಿ ವರ್ಷಕ್ಕೆ 100 ಲೀಟರ್‌ಗಳಷ್ಟು ಆಲ್ಕೋಹಾಲ್ ಸೇವನೆಯಿತ್ತು. 2020ರಲ್ಲಿ ಇದು 75 ಲೀಟರ್‌ಗೆ ಇಳಿದಿದೆ. ಆಲ್ಕೋಹಾಲ್ ಮಾರಾಟದಲ್ಲಿನ ಕಡಿತವು ಜಪಾನ್‌ನ ಬಜೆಟ್‌ಗೆ ಹೊಡೆತ ನೀಡಿದೆ. ಈಗಾಗಲೇ 290 ಬಿಲಿಯನ್ ಡಾಲರ್ ಕೊರತೆಯನ್ನು ಅದು ಎದುರಿಸುತ್ತಿದೆ. 1980ರಲ್ಲಿ ಜಪಾನ್ ಮದ್ಯದಿಂದ 5 ಪ್ರತಿಶತದಷ್ಟು ಆದಾಯ ಪಡೆಯುತ್ತಿತ್ತು, 2011 ರಲ್ಲಿ ಅದು 3 ಪ್ರತಿಶತದಷ್ಟಿತ್ತು, ಆದರೆ 2020 ರಲ್ಲಿ ಅದು ಶೇ.1.7ಕ್ಕೆ ಕುಸಿದಿದೆ. 2020 ರ ಆರ್ಥಿಕ ವರ್ಷದಲ್ಲಿ, ಜಪಾನಿನ ಸರ್ಕಾರವು 1980 ಕ್ಕೆ ಹೋಲಿಸಿದರೆ ಆಲ್ಕೋಹಾಲ್ ಮೇಲಿನ ತೆರಿಗೆಯಿಂದ 110 ಶತಕೋಟಿ ಪೌಂಡ್‌ನಷ್ಟು ಆದಾಯದ ನಷ್ಟವನ್ನು ಅನುಭವಿಸಿತು.
ಇದು 30 ವರ್ಷಗಳಲ್ಲೇ ಅತಿ ದೊಡ್ಡ ಕುಸಿತ ಎನ್ನಲಾಗ್ತಿದೆ. ಹೆಚ್ಚಿನ ಜನರು ಕಚೇರಿ ಮುಗಿದ ನಂತರ ಸಹೋದ್ಯೋಗಿಗಳೊಂದಿಗೆ ಮದ್ಯ ಸೇವಿಸುತ್ತಿದ್ದರು. ಆದ್ರೆ ಕೋವಿಡ್ ಬಿಕ್ಕಟ್ಟಿನಿಂದಾಗಿ ಮನೆಯಿಂದಲೇ ಕೆಲಸ ಮಾಡುವ ಪ್ರವೃತ್ತಿ ಹೆಚ್ಚಾಗಿದ್ದು, ಮದ್ಯ ಸೇವನೆಯ ಅಭ್ಯಾಸ ನಿಂತು ಹೋಗಿದೆ. ಜಪಾನ್‌ನಲ್ಲಿ ಬಿಯರ್ ಮಾರಾಟ ಸಹ ಶೇ.20 ರಷ್ಟು ಕಡಿಮೆಯಾಗಿದೆ. ಜಪಾನ್ ಆಯೋಜಿಸಿರುವ ಮದ್ಯ ಸೇವನೆ ಸ್ಪರ್ಧೆಯ ಅಂತಿಮ ಸುತ್ತು ಪ್ರವೇಶಿಸಿದವರನ್ನು ನವೆಂಬರ್ 10 ರಂದು ಟೋಕಿಯೊದಲ್ಲಿ ನಡೆಯಲಿರುವ ಗಾಲಾ ಪ್ರಶಸ್ತಿ ಸಮಾರಂಭಕ್ಕೆ ಆಹ್ವಾನಿಸಲಾಗುತ್ತದೆ.