ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಎಂಬಂತೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ಮುಂದೆ ವಿದೇಶಿ ಮದ್ಯವನ್ನು ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದಾಗಿದೆ.
ದೇಶಿಯ ಮಾರ್ಗಗಳಲ್ಲಿ ದೆಹಲಿ ವಿಮಾನ ನಿಲ್ದಾಣದ ಮೂರು ಟರ್ಮಿನಲ್ಗಳಲ್ಲಿ ಕನಿಷ್ಟ ಆರು ಮದ್ಯದ ಅಂಗಡಿಗಳು ಶೀಘ್ರದಲ್ಲಿಯೇ ತೆರೆಯುವ ಸಾಧ್ಯತೆಯಿದೆ. ದೆಹಲಿಯ ಹೊಸ ಅಬಕಾರಿ ನೀತಿಯ ಅಡಿಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಟರ್ಮಿನಲ್ 1 ಹಾಗೂ ಟರ್ಮಿನಲ್ 2ರ ನಿರ್ಗಮನ ಹಾಗೂ ಆಗಮನ ವಿಭಾಗಗಳಲ್ಲಿ ತಲಾ ಒಂದು ಸೇರಿದಂತೆ ಆರು ಮದ್ಯದ ಅಂಗಡಿಗಳು ಮಾರ್ಚ್ ಮೊದಲ ವಾರದೊಳಗೆ ತೆರೆಯುವ ಸಾಧ್ಯತೆಯಿದೆ. ದೆಹಲಿಯ ಹೊಸ ಅಬಕಾರಿ ನೀತಿಯು ದೇಶಿಯ ಮತ್ತು ಅಂತಾರಾಷ್ಟ್ರೀಯ ಟರ್ಮಿನಲ್ಗಳಲ್ಲಿ ಕನಿಷ್ಟ 10 ಮದ್ಯದ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದೆ.
ಹೊಸ ಅಬಕಾರಿ ನೀತಿ ಜಾರಿಯಾಗುತ್ತಿದ್ದಂತೆ ದೆಹಲಿಯಲ್ಲಿ ಮದ್ಯ ಮಾರಾಟಗಾರರು ಶೇ.30-40ರಷ್ಟು ಭಾರೀ ರಿಯಾಯಿತಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ದೆಹಲಿ ಸರ್ಕಾರವು ತನ್ನ ಹೊಸ ಅಬಕಾರಿ ನೀತಿಯನ್ನು ನವೆಂಬರ್ 2021 ರಲ್ಲಿ ಪ್ರಾರಂಭಿಸಿತು. ಫೆಬ್ರವರಿ 1, 2022 ರವರೆಗೆ ಅನುಮತಿಸಲಾದ 849 ಅಂಗಡಿಗಳಲ್ಲಿ ಕನಿಷ್ಠ 552 ಮದ್ಯದ ಅಂಗಡಿಗಳನ್ನು ತೆರೆಯಲಾಗಿದೆ.