ಮದ್ಯದ ಅಮಲಿನಲ್ಲಿದ್ದ ಮೊಮ್ಮಗನೊಬ್ಬ ತನ್ನ ಅಜ್ಜಿಯನ್ನೇ ಕೊಂದಿರುವ ಬರ್ಬರ ಘಟನೆ ಧಾರವಾಡದ ಜಯನಗರ ದುರ್ಗಾದೇವಿ ಬಡಾವಣೆಯಲ್ಲಿ ನಡೆದಿದೆ.
ಕುಡಿತದ ವ್ಯಸನಿಯಾಗಿದ್ದ ದತ್ತಾತ್ರೇಯ ಎಂಬಾತ ಮದ್ಯ ಕುಡಿಯಲು ಹಣ ಕೊಡುವಂತೆ ತನ್ನ ತಾಯಿ ಗೌರಮ್ಮ ಹಾಗೂ ಅಜ್ಜಿ ಭೀಮವ್ವರನ್ನು ಪ್ರತಿನಿತ್ಯ ಪೀಡಿಸುತ್ತಿದ್ದ ಎನ್ನಲಾಗಿದೆ.
ಸೋಮವಾರ ತಡರಾತ್ರಿ ಕಂಠಪೂರ್ತಿ ಕುಡಿದು ಬಂದಿದ್ದ ದತ್ತಾತ್ರೇಯ, ತಾಯಿ ಹಾಗೂ ಅಜ್ಜಿಯೊಂದಿಗೆ ಜಗಳ ತೆಗೆದಿದ್ದು, ಈ ವೇಳೆ ರಾಡ್ ನಿಂದ ತನ್ನ ಅಜ್ಜಿ ಮೇಲೆ ಹಲ್ಲೆ ನಡೆಸಿದ್ದಾನೆ. ತಡೆಯಲು ಬಂದ ತಾಯಿ ಗೌರಮ್ಮ ಮೇಲೂ ಹಲ್ಲೆ ಮಾಡಿದ್ದಾನೆ.
ಅಜ್ಜಿ ಭೀಮವ್ವ ಸಾವನ್ನಪ್ಪಿದ್ದು, ತಾಯಿ ಗೌರಮ್ಮ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಉಪನಗರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.