ವಿವಾಹಗಳು ದಂಪತಿಗಳ ಜೀವನದಲ್ಲಿ ಮರೆಯಲಾಗದ ಕ್ಷಣಗಳಲ್ಲಿ ಒಂದಾಗಿದೆ. ವಿವಾಹ ಅಂದ್ರೆ ಅಲಂಕಾರ, ಅತಿಥಿಗಳ ಪಟ್ಟಿ ಮಾತ್ರವಲ್ಲ ಊಟಕ್ಕೂ ಹೆಚ್ಚಿನ ಮಹತ್ವವಿದ್ದು, ವಿಶೇಷ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಬಗೆ-ಬಗೆಯ ತಿನಿಸುಗಳು ಮದುವೆಯಲ್ಲಿ ಮಾಡಲಾಗುತ್ತದೆ. ಒಂದು ವೇಳೆ ಮದುವೆಯಲ್ಲಿ ಅತಿಥಿಗಳಿಗೆ ಸಲಾಡ್ ಮಾತ್ರ ನೀಡಿದ್ರೆ ಹೇಗಿರುತ್ತದೆ..? ಇಲ್ಲೂ ಆಗಿದ್ದು ಅದೇ.
ಹೌದು, ಮದುವೆಯ ಸಲಾಡ್ ಮೆನುವನ್ನು ತಿರಸ್ಕರಿಸಿ, ಹೊರಗಿನಿಂದ ಪಿಜ್ಜಾ ಆರ್ಡರ್ ಮಾಡಿದ್ದ ವ್ಯಕ್ತಿಯನ್ನು ಮದುವೆ ಸ್ಥಳದಿಂದ ಹೊರಹಾಕಲಾಗಿದೆ. 36 ವರ್ಷದ ವ್ಯಕ್ತಿಯೊಬ್ಬರು ತಮ್ಮ ಸ್ನೇಹಿತೆಯ ಮದುವೆಗೆ ಹಾಜರಾಗಿದ್ದರು. ಊಟದಲ್ಲಿ ಸಲಾಡ್ ಅನ್ನು ಮಾತ್ರ ನೀಡುತ್ತಿರುವುದನ್ನು ಕಂಡು ಅವರು ಅಚ್ಚರಿಗೊಳಗಾಗಿದ್ದಾರೆ. ಹೀಗಾಗಿ ಅವರು ಪಿಜ್ಜಾ ಆರ್ಡರ್ ಮಾಡಿದ್ದಕ್ಕೆ ಮದುವೆ ಮನೆಯಿಂದ ಹೊರಹಾಕಲ್ಪಟ್ಟಿದ್ದಾರೆ.
ಈ ಬಗ್ಗೆ ಅವರು ರೆಡ್ಡಿಟ್ ನಲ್ಲಿ ಸಂಪೂರ್ಣ ಘಟನೆಯನ್ನು ಹಂಚಿಕೊಂಡಿದ್ದಾರೆ. ವಿವಾಹವು ಎಂಟು ಗಂಟೆಗಳ ಕಾರ್ಯಕ್ರಮವಾಗಿದ್ದು, ಸಮಾರಂಭದ ನಂತರ ಆರತಕ್ಷತೆ ಕಾರ್ಯಕ್ರಮವಿತ್ತು. ಅವರಿಗೆ ಔಷಧಿ ತೆಗೆದುಕೊಳ್ಳಲು ಇರುವುದರಿಂದ ಊಟ ಮಾಡಲೇಬೇಕಾಗುತ್ತದೆ. ಆದರೆ, ಮದುವೆಯಲ್ಲಿ ಸಲಾಡ್ ಮಾತ್ರ ನೀಡಲಾಗುತ್ತಿತ್ತು. ಇದು ತನ್ನ ಹೊಟ್ಟೆ ಹಸಿವನ್ನು ನೀಗಿಸುವುದಿಲ್ಲ ಎಂದು ಅರಿತ ಆ ವ್ಯಕ್ತಿ ಪಿಜ್ಜಾ ಆರ್ಡರ್ ಮಾಡಲು ನಿರ್ಧರಿಸಿದ್ದಾರೆ. ಪಿಜ್ಜಾವನ್ನು ತಮ್ಮ ಕಾರಿನಲ್ಲಿ ತಿನ್ನಲು ಅವರು ತೀರ್ಮಾನಿಸಿದ್ದರು. ಇವರ ಜೊತೆಗೆ ಮದುವೆಗೆ ಬಂದ ಅತಿಥಿಗಳು ಕೂಡ ಸೇರಿಕೊಂಡಿದ್ದಾರೆ.
ಕೆಲವು ಅತಿಥಿಗಳೊಂದಿಗೆ ಅವರು ಕಾರಿನಲ್ಲಿ ಪಿಜ್ಜಾ ತಿನ್ನಲು ನಿರ್ಧರಿಸಿದ್ದಾರೆ. ಈ ವೇಳೆ ಮದುವೆ ಮನೆಯಿಂದ ವರ ನಾಪತ್ತೆಯಾಗಿದ್ದಾನೆ. ವಧು, ವರ ಎಲ್ಲಿದ್ದಾನೆ ಎಂದು ಹುಡುಕುವಾಗ ಆತ ಕೂಡ ಇವರ ಜೊತೆ ಪಿಜ್ಜಾ ತಿನ್ನಲು ಸೇರಿಕೊಂಡಿದ್ದಾನೆ. ಹೀಗಾಗಿ ಈ ವ್ಯಕ್ತಿ ಮದುವೆ ಸ್ಥಳದಿಂದ ಆಚೆ ಹಾಕಲ್ಪಟ್ಟಿದ್ದಾರೆ.