ಸಾಕು ಪ್ರಾಣಿಗಳು ತಮ್ಮ ಮನೆಯ ಸದಸ್ಯರಂತೆಯೇ ಇರುತ್ತವೆ. ಮಾಲೀಕರು ಸಾಕು ಶ್ವಾನಗಳನ್ನು ತಮ್ಮ ಮಕ್ಕಳಂತೆಯೇ ನೋಡಿಕೊಳ್ಳುತ್ತಾರೆ, ಮುದ್ದಿಸುತ್ತಾರೆ. ಇದೀಗ ವಧುವೊಬ್ಬಳು ಮದುವೆಯಂದು ತನ್ನ ಶ್ವಾನಕ್ಕೆ ತನ್ನಂತೆಯೇ ಮ್ಯಾಚಿಂಗ್ ಉಡುಪಿನಲ್ಲಿ ಸಿದ್ಧಪಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ದಿ ವೆಡ್ಡಿಂಗ್ ಬ್ರಿಗೇಡ್ ಪುಟ ಹಂಚಿಕೊಂಡಿದೆ. ವಧುವು ತನ್ನ ಉಡುಪಿನ ಬಣ್ಣದಂತೆಯೇ ಅದಕ್ಕೂ ಬಟ್ಟೆ ತೊಡಿಸಿದ್ದಾಳೆ. ಈ ವಿಡಿಯೋ ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ಮಮ್ಮಿ ತನ್ನ ಮದುವೆಗೆ ನನ್ನನ್ನು ಹೇಗೆ ರೆಡಿ ಮಾಡಿದ್ಲು ನೋಡಿ ಅಂತಾ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.
ವಿಡಿಯೊದಲ್ಲಿ, ವಧು ಸುಂದರವಾದ ಲ್ಯಾವೆಂಡರ್ ಲೆಹೆಂಗಾ ಮತ್ತು ಅದಕ್ಕೆ ಹೊಂದಿಕೆಯಾಗುವ ಆಭರಣ ಧರಿಸಿದ್ದಳು. ಆಕೆಯ ಮುದ್ದಾದ ನಾಯಿಯು ಅವಳ ತೊಡೆಯ ಮೇಲೆ ನೇರಳೆ ಬಟ್ಟೆ ಮತ್ತು ಸಣ್ಣ ಬೂಟುಗಳನ್ನು ಧರಿಸಿ ಕುಳಿತಿದೆ. ವಧು ನಾಯಿಯ ಕೂದಲನ್ನು ಬಾಚಿ ಅದಕ್ಕೆ ಹೊಂದಿಕೆಯಾಗುವಂತೆ ನೇರಳೆ ಬಣ್ಣದ ಬಿಲ್ಲನ್ನು ಹಾಕುವುದನ್ನು ಕಾಣಬಹುದು. ನಂತರ ನಾಯಿಯ ಜೊತೆ ಮದುವೆಯ ಸ್ಥಳಕ್ಕೆ ಪ್ರವೇಶಿಸುತ್ತಾಳೆ.
ಈ ವಿಡಿಯೋ ಅನೇಕ ನೆಟ್ಟಿಗರ ಹೃದಯ ಗೆದ್ದಿದೆ. ನೆಟ್ಟಿಗರು ಕೂಡ ಮದುವೆಗೆ ತಮ್ಮ ಸಾಕುಪ್ರಾಣಿಗಳನ್ನು ಇದೇ ರೀತಿಯಲ್ಲಿ ಅಲಂಕರಿಸಲು ಇಷ್ಟಪಡುವುದಾಗಿ ಹೇಳಿದ್ದಾರೆ.