ಮದುವೆ ಮನೆ ಅಂದ್ರೆ ಸಾಕು ಅಲ್ಲಿ ವಾತಾವರಣ ಹೇಗಿರುತ್ತೆ ಅನ್ನೋದು ಎಲ್ಲರಿಗೂ ಚಿರಪರಿಚಿತ. ಒಂದು ಕಡೆ ಸೇರಿರೋ ಅತಿಥಿಗಳ ಮಾತು ನಗು ಎಲ್ಲೆಲ್ಲೂ ಕೇಳಿ ಬರ್ತಿದ್ರೆ, ಇನ್ನೊಂದೆಡೆ ನವವಧು, ವರರು ಅರಿಶಿನ, ಮೆಹಂದಿ, ಪೂಜೆ ಹೀಗೆ ಬೇರೆ-ಬೇರೆ ಕಾರ್ಯದಲ್ಲಿ ಬ್ಯುಸಿಯಾಗಿರ್ತಾರೆ. ಹಿರಿಯರು ಹೇಳುವ ಪ್ರಕಾರ ಎಲ್ಲ ಪದ್ಧತಿಗಳು ಪೂರ್ಣಗೊಳ್ಳುವ ತನಕವೂ ಮನೆಯಿಂದ ಹೊರಗೆ ಹೋಗಬಾರದು.
ಈಗ ಕಾಲ ಬದಲಾಗಿದೆ. ವಿದ್ಯಾವಂತರು ಈ ಆಚರಣೆಗಳನ್ನ ಸಂಪೂರ್ಣವಾಗಿ ನಂಬುವುದಿಲ್ಲ. ಅವರಿಗೆ ಅವರವರ ಜವಾಬ್ದಾರಿಗಳು ಮುಖ್ಯವಾಗಿರುತ್ತೆ. ಗುಜರಾತ್ ನವವಧು ಒಬ್ಬಳು ಮದುವೆಗಿಂತ ಮುಖ್ಯ ಮತ ಚಲಾಯಿಸುವುದು ಎಂದು, ಮತಗಟ್ಟೆಗೆ ಹೋಗಿ ಮತ ಚಲಾಯಿಸಿದ್ದಾಳೆ. ಈ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗುಜರಾತ್‌ನಲ್ಲಿ ಈಗ 2022 ಅಸೆಂಬ್ಲಿ ಚುನಾವಣಾ ಕಾವು ಹೆಚ್ಚಾಗಿದ್ದು, ಸೌರಾಷ್ಟ್ರ, ಕಚ್ ಮತ್ತು ದಕ್ಷಿಣ ಪ್ರದೇಶಗಳ 19 ಜಿಲ್ಲೆಗಳ 89 ಸ್ಥಾನಗಳಲ್ಲಿ ಇತ್ತಿಚೆಗೆ ಮತದಾನ ನಡೆದಿದೆ. ಈ ಸಂದರ್ಭದಲ್ಲಿ ವಲ್ಸಾದ್ ಜಿಲ್ಲೆಯಲ್ಲಿ ಉಬರ್ಗಾಂವ್ ವಿಧಾನಸಭಾ ಕ್ಷೇತ್ರದ ಮತಗಟ್ಟೆಗೆ ನವವಧು ಒಬ್ಬಳು, ತನ್ನ ಮದುವೆ ಕಾರ್ಯವನ್ನ ಮಧ್ಯದಲ್ಲೇ ಬಿಟ್ಟು ಬಂದು ಮತ ಚಲಾಯಿಸಿದ್ದು, ಎಲ್ಲರ ಗಮನ ಸೆಳೆದಿದೆ. ಹೀಗೆ ಮತ ಹಾಕಲು ಬಂದ ನವವಧುವಿನ ಹೆಸರು ಕಾಮುಬೆನ್ ಪಟೇಲ್.
ಈ ವಿಡಿಯೋವನ್ನ ಚುನಾವಣಾ ಆಯೋಗ ತನ್ನ ಟ್ವಿಟ್ಟರ್ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಕಾಮುಬೇನ್ ಗುಲಾಬಿ ಬಣ್ಣದ ಲೆಹೆಂಗಾ ಧರಿಸಿರೊದನ್ನ ಗಮನಿಸಬಹುದು. ಟ್ವಿಟ್ಟರ್‌ನಲ್ಲಿ ಈ ವಿಡಿಯೋ ಸದ್ಯಕ್ಕೆ ವೈರಲ್ ಆಗಿದ್ದು, ಸಾವಿರಾರು ಜನ ಈ ವಿಡಿಯೋವನ್ನ ವೀಕ್ಷಿಸಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ ಈಕೆ ಅನೇಕರಿಗೆ ಮಾದರಿಯಾಗಿದ್ದಾರೆ ಎಂದು ಕಾಮೆಂಟ್ ಬಾಕ್ಸ್‌ನಲ್ಲಿ ಅಭಿಪ್ರಾಯ ಪಟ್ಟಿದ್ಧಾರೆ.