ಭಾರತೀಯ ವಿವಾಹ ಸಮಾರಂಭಗಳು ಯಾವುದೇ ಸಿನಿಮಾಗೂ ಕಮ್ಮಿಯಿಲ್ಲ. ಸಿನಿಮಾದಂತೆಯೇ ಹಲವು ಟ್ವಿಸ್ಟ್, ರೋಚಕ ಘಟನಾವಳಿಗಳಿಗೆ ದೇಸಿ ಮದುವೆಗಳು ಸಾಕ್ಷಿಯಾಗಿವೆ. ಇದೀಗ ವಿಲಕ್ಷಣ ಘಟನೆಯಲ್ಲಿ, ಮದುವೆ ಮಂಟಪಕ್ಕೆ ಆಗಮಿಸಿದ ಮಾಜಿ ಪ್ರೇಮಿಯೊಬ್ಬ ತನ್ನ ವಧುವಿನ ಹಣೆಗೆ ಸಿಂಧೂರವಿಟ್ಟಿದ್ದಾನೆ.
ಬಿಹಾರದ ರಾಜಧಾನಿ ಪಾಟ್ನಾ ಈ ವಿಲಕ್ಷಣ ಘಟನೆಗೆ ಸಾಕ್ಷಿಯಾಗಿದೆ. ಮಂಗಳವಾರ ತಡರಾತ್ರಿ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆ ಮದುವೆಯನ್ನು ನಿಲ್ಲಿಸಲು ಯತ್ನಿಸಿದ ಘಟನೆ ನಡೆದಿದೆ. ವಧು-ವರ ಪರಸ್ಪರ ಮಾಲೆಗಳನ್ನು ವಿನಿಮಯ ಮಾಡಿಕೊಳ್ಳುವ ಸಮಯಕ್ಕೆ ಸರಿಯಾಗಿ ಪ್ರೇಮಿ ವಿವಾಹ ಮಂಟಪಕ್ಕೆ ಆಗಮಿಸಿದ್ದು, ಮದುವೆಯು ನಾಟಕೀಯವಾಗಿ ಮಾರ್ಪಟ್ಟಿದೆ.
ನೇರವಾಗಿ ಮಂಟಪಕ್ಕೆ ತೆರಳಿದ ಪ್ರೇಮಿ, ವರನ ಕೈಯಿಂದ ಹಾರವನ್ನು ಕಿತ್ತು ವಧುವಿನ ಕೊರಳಿಗೆ ಹಾಕಿದ್ದಾನೆ. ಅಷ್ಟೇ ಅಲ್ಲ ಬಲವಂತವಾಗಿ ಆಕೆಯ ಹಣೆಯ ಮೇಲೆ ಸಿಂಧೂರವಿಟ್ಟಿದ್ದಾನೆ. ವಧು ತನ್ನನ್ನು ಬಿಟ್ಟು ಬಿಡುವಂತೆ ಆತನ ಬಳಿ ವಿನಂತಿಸಿಕೊಂಡಿದ್ದಾಳೆ. ಇನ್ನು ಘಟನೆಯಿಂದ ಮದುವೆಯ ಸ್ಥಳದಲ್ಲಿ ಹಾಜರಿದ್ದ ಅತಿಥಿಗಳು ಆಘಾತಕ್ಕೊಳಗಾಗಿದ್ದಾರೆ.
ಘಟನೆಯಿಂದ ಕೋಪಗೊಂಡ ಕೆಲವು ಅತಿಥಿಗಳು ಮತ್ತು ಸಂಬಂಧಿಕರು, ವೇದಿಕೆಯ ಮೇಲೆ ಹೋಗಿ ಆ ವ್ಯಕ್ತಿಯನ್ನು ಹಿಡಿದು ಥಳಿಸಿದ್ದಾರೆ. ವಧು ತನ್ನ ಪ್ರಿಯಕರನನ್ನು ಬಿಡುವಂತೆ ವಿನಂತಿಸುತ್ತಲೇ ಇದ್ದಳು. ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡ್ರು.
ಇನ್ನು ಈ ಸಿನಿಮೀಯ ಶೈಲಿಯ ಘಟನೆಯಿಂದ ಬೇಸರಗೊಂಡ ವರನ ಕಡೆಯವರು ಮದುವೆಯನ್ನು ರದ್ದುಗೊಳಿಸಿದ್ದಾರೆ. ವರನನ್ನು ಅಕ್ಷಯ್ ಕುಮಾರ್ ಎಂದು ಗುರುತಿಸಲಾಗಿದೆ. ತನ್ನ ಸಂಬಂಧವನ್ನು ಮರೆಮಾಚಿದ್ದಕ್ಕಾಗಿ ವಧುವಿನ ಕಡೆಯವರು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಮದುವೆಯನ್ನು ರದ್ದುಗೊಳಿಸಿದ್ದಾರೆ.