ಮದುವೆ ಪ್ರತಿಯೊಬ್ಬರ ಜೀವನದಲ್ಲಿ ಒಂದು ಪ್ರಮುಖ ಹಂತವಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಯುವತಿಯರು ಹೊಸ ಸಂಬಂಧವನ್ನು ಪ್ರಾರಂಭಿಸುವ ಮೊದಲು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ತೂಕ ಇಳಿಸುವುದು ಕೂಡ ಇವುಗಳಲ್ಲೊಂದು.
ಮದುವೆಯ ದಿನದಂದು ಸ್ಲಿಮ್ ಆಗಿ ಕಾಣಬೇಕೆಂಬುದು ಎಲ್ಲರ ಬಯಕೆ. ಆದರೆ ಮದುವೆಯ ನಂತರ ಮಹಿಳೆಯರ ತೂಕ ಇದ್ದಕ್ಕಿದ್ದಂತೆ ಹೆಚ್ಚಾಗುವುದನ್ನು ನೀವು ಗಮನಿಸಿರಬೇಕು. ಮದುವೆಯಾಗಿ ತಿಂಗಳು ಕಳೆಯುವಷ್ಟರಲ್ಲಿ ನಿಧಾನವಾಗಿ ಬೊಜ್ಜು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದರ ಹಿಂದಿನ ಕಾರಣಗಳೇನು ಎಂಬುದನ್ನು ನೋಡೋಣ.
ಯುವತಿಯರು ಮದುವೆಗೆ ಮುಂಚೆ ಆಹಾರ ಮತ್ತು ವ್ಯಾಯಾಮದ ಬಗ್ಗೆ ಬಹಳ ಜಾಗೃತರಾಗಿರುತ್ತಾರೆ. ಸಂಪೂರ್ಣ ಫಿಟ್ ಆಗಿ, ಸುಂದರವಾಗಿದ್ದರೆ ಪರಿಪೂರ್ಣ ಸಂಗಾತಿಯನ್ನು ಪಡೆಯಬಹುದು ಅನ್ನೋದು ಇದರ ಹಿಂದಿನ ಲೆಕ್ಕಾಚಾರ. ಆದರೆ ಮದುವೆಯ ನಂತರ ಆಹಾರಕ್ರಮವನ್ನು ಅನುಸರಿಸಲು ಸಾಧ್ಯವಾಗುವುದಿಲ್ಲ, ಅಥವಾ ಅದರ ಬಗ್ಗೆ ಅಸಡ್ಡೆ ತೋರಬಹುದು. ಮದುವೆ ಆಯಿತಲ್ಲ ಇನ್ನೇನು ಎಂಬ ನಿರಾಳತೆಯ ಭಾವ ಕೂಡ ಬರಬಹುದು. ದಿನನಿತ್ಯದ ವ್ಯಾಯಾಮ ಮತ್ತು ಆರೋಗ್ಯಕರ ಅಭ್ಯಾಸವನ್ನು ಬಿಟ್ಟರೆ ಅದರ ಪರಿಣಾಮವು ದೇಹದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಮದುವೆಯ ನಂತರ ಯುವತಿಯರು ಹೆಚ್ಚಾಗಿ ಮನೆಕೆಲಸದಲ್ಲಿ ನಿರತರಾಗುತ್ತಾರೆ. ಸಂಬಂಧಿಕರ ಮನೆಗಳಿಗೆ ಭೇಟಿ ನೀಡುವುದು, ಹನಿಮೂನ್ ಓಡಾಟ ಹೀಗೆ ಬ್ಯುಸಿಯಾಗಿಬಿಡುತ್ತಾರೆ. ಇದರಿಂದ ವ್ಯಾಯಾಮ ಅಥವಾ ಇತರ ದೈಹಿಕ ಚಟುವಟಿಕೆಗಳತ್ತ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಪರಿಣಾಮ ಹೊಟ್ಟೆ ಮತ್ತು ಸೊಂಟದ ಬಳಿ ಕೊಬ್ಬು ಸಂಗ್ರಹವಾಗುತ್ತದೆ. ಮದುವೆ ನಂತರವೂ ಸಾಕಷ್ಟು ಆಚರಣೆ, ಸಂಪ್ರದಾಯಗಳಿರುತ್ತವೆ. ಮನೆಯಲ್ಲಿ ಅತಿಥಿಗಳ ಆಗಮನ, ವಿಶೇಷ ತಿಂಡಿ ತಿನಿಸುಗಳು ಇವೆಲ್ಲ ಸಾಮಾನ್ಯ. ಎಣ್ಣೆಯುಕ್ತ ಮತ್ತು ಅನಾರೋಗ್ಯಕರ ಆಹಾರವನ್ನು ಸೇವಿಸಬೇಕಾಗುತ್ತದೆ. ಕೆಲವೊಮ್ಮೆ ಅತಿಯಾಗಿ ತಿನ್ನುವುದರಿಂದ, ತೂಕ ನಿಯಂತ್ರಣವು ಸಾಧ್ಯವಾಗುವುದಿಲ್ಲ.
ಮದುವೆಯ ನಂತರ ಹುಡುಗಿಯರ ಆಫೀಸ್ ಲೈಫ್ ಮುಂದುವರಿದರೆ, ಡಬಲ್ ಜವಾಬ್ದಾರಿಗಳಿಂದಾಗಿ ಟೆನ್ಷನ್ ಹೆಚ್ಚಾಗುತ್ತದೆ. ಒತ್ತಡದಿಂದಾಗಿ ತೂಕ ಹೆಚ್ಚಾಗಬಹುದು. ಮದುವೆಯ ಬಳಿಕ ಇಡೀ ಕುಟುಂಬದ ಜವಾಬ್ಧಾರಿ ಮಹಿಳೆಯ ಹೆಗಲೇರುತ್ತದೆ. ಇದರಿಂದಾಗಿ ಅವರು ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ನಿದ್ದೆ ಕಡಿಮೆಯಾದರೆ ತೂಕವು ವೇಗವಾಗಿ ಹೆಚ್ಚಾಗುತ್ತದೆ. ಮದುವೆಯ ನಂತರ ಮಹಿಳೆಯರು ತಮ್ಮ ಗಂಡನೊಂದಿಗೆ ಅನೇಕ ಬಾರಿ ದೈಹಿಕ ಸಂಬಂಧವನ್ನು ಹೊಂದಬೇಕಾಗುತ್ತದೆ. ಇದರಿಂದಾಗಿ ಅವರಲ್ಲಿ ಹಾರ್ಮೋನ್ ಬದಲಾವಣೆಗಳಾಗುತ್ತವೆ. ಇದು ಕೂಡ ತೂಕ ಹೆಚ್ಚಳಕ್ಕೆ ಕಾರಣವಾಗಿರಬಹುದು.