
ಮಧ್ಯಪ್ರದೇಶದ ದಾಮೋಹ್ ಎಂಬಲ್ಲಿ ಮದುವೆ ಆಮಂತ್ರಣ ಪತ್ರಿಕೆಯೊಂದು ಕೋಲಾಹಲ ಸೃಷ್ಟಿಸಿದೆ. ಮದುವೆ ಕಾರ್ಡ್ ಮುದ್ರಿಸಿದ್ದ ವಧುವಿನ ಸಹೋದರ ಜೈಲು ಪಾಲಾಗಿದ್ದಾನೆ. ರಾಜ್ಯದ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡಿದ್ದ ಯುವಕನನ್ನು ಪೊಲೀಸರು ಕಂಬಿ ಹಿಂದೆ ಕಳಿಸಿದ್ದಾರೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಖಾಸಗಿ ಕಾರ್ಯದರ್ಶಿ ಮೂಲತಃ ದಾಮೋಹ್ ನಿವಾಸಿ. ಅದೇ ನಗರದ ಆಕಾಶ್ ದುಬೆ ಎಂಬ ವ್ಯಕ್ತಿಯ ಸಹೋದರಿಯ ವಿವಾಹ ನಿಶ್ಚಯವಾಗಿತ್ತು.
ಆಮಂತ್ರಣ ಪತ್ರದಲ್ಲಿ ಆಕಾಶ್ ದುಬೆ ತನ್ನ ಹೆಸರಿನ ಮುಂದೆ ಸಿಎಂ ಆಪ್ತ ಕಾರ್ಯದರ್ಶಿ ಎಂದು ಬರೆದುಕೊಂಡಿದ್ದ. ನಗರದಲ್ಲಿ ಮದುವೆ ಕಾರ್ಡ್‌ಗಳನ್ನು ವಿತರಿಸಲಾಯಿತು. ಆಕಾಶ್, ಎಸ್ಪಿ ರಾಕೇಶ್ ಕುಮಾರ್ ಸಿಂಗ್ ಅವರನ್ನೂ ಆಹ್ವಾನಿಸಿದ್ದ. ಕಾರ್ಡ್ ನೋಡಿದ ಎಸ್‌ಪಿ ಆಕಾಶ್ ಬಗ್ಗೆ ವಿಚಾರಿಸಿದ್ರು. ಮುಖ್ಯಮಂತ್ರಿಗಳ ಸಿಬ್ಬಂದಿಯಲ್ಲಿ ಆ ಹೆಸರಿನವರ್ಯಾರೂ ಇಲ್ಲ ಅನ್ನೋದು ಖಚಿತವಾಗಿದೆ. ಕೂಡಲೇ ಈ ಬಗ್ಗೆ ತನಿಖೆ ನಡೆಸುವಂತೆ ಎಸ್‌ಪಿ ಪೊಲೀಸರಿಗೆ ಸೂಚಿಸಿದರು.
ಕೊತ್ವಾಲಿ ಪೊಲೀಸರ ತನಿಖೆ ವೇಳೆ ಆಕಾಶ್ ದುಬೆ ತಾನು ಸಿಎಂ ಆಪ್ತ ಕಾರ್ಯದರ್ಶಿಯೆಂದು ಸುಳ್ಳು ಹೇಳಿರುವುದು ಬಹಿರಂಗವಾಗಿದೆ. ಕೂಡಲೇ ಆತನನ್ನು ವಶಕ್ಕೆ ಪಡೆದ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಆರೋಪಿ ಆಕಾಶ್ ಬಹಳ ದಿನಗಳಿಂದ ಸಿಎಂ ಆಪ್ತಕಾರ್ಯದರ್ಶಿಯೆಂದು ಸುಳ್ಳು ಹೇಳಿಕೊಂಡು ಅನೇಕ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರನ್ನು ಮರುಳು ಮಾಡುತ್ತಿದ್ದ ಅನ್ನೋದು ಕೂಡ ಬಹಿರಂಗವಾಗಿದೆ.