ಮದುವೆ ನಂತರ ನಮ್ಮ ಜೀವನ ಸಂಪೂರ್ಣ ಬದಲಾಗುತ್ತದೆ. ಅದರಲ್ಲೂ ಮಹಿಳೆಯರಿಗೆ ಹೊಸ ಸ್ಥಳ, ಹೊಸ ಜನರೊಂದಿಗೆ ಬೆರೆತು ಬಾಳಬೇಕಾದ ಅನಿವಾರ್ಯತೆ ಇರುತ್ತದೆ. ದಾಂಪತ್ಯ ಹೊಸದಾಗಿದ್ದಾಗ ಎಲ್ಲವೂ ಚೆನ್ನ. ಪರಸ್ಪರರಿಗಾಗಿ ಬದುಕನ್ನೇ ಮುಡಿಪಾಗಿಡುತ್ತೇವೆ ಎಂಬ ಭಾವನೆ ತುಂಬಿರುತ್ತದೆ.
ಆದ್ರೆ ಕೆಲವೊಂದು ಸಣ್ಣ ಪುಟ್ಟ ತಪ್ಪುಗಳು ನಿಮ್ಮ ದಾಂಪತ್ಯಕ್ಕೆ ಮುಳ್ಳಾಗಬಹುದು. ಮದುವೆಯಾದ ಹೊಸದರಲ್ಲಿ ನೀವು ಇಂತಹ ಕೆಲವು ಭಾವನೆಗಳನ್ನು, ತಪ್ಪುಗಳನ್ನು ಅವಾಯ್ಡ್ ಮಾಡುವುದು ಉತ್ತಮ. ಯಾಕಂದ್ರೆ ಮದುವೆಯಾದ ಹೊಸದರಲ್ಲಿಯೇ ಈ ತಪ್ಪುಗಳು ನಿಮ್ಮ ನಡುವೆ ಬಿರುಕು ಮೂಡಿಸಬಹುದು.
ಪರಿಪೂರ್ಣತೆಯನ್ನು ಬಯಸುವುದು ಮೊದಲ ತಪ್ಪು. ನೀವು ಮತ್ತು ನಿಮ್ಮ ಸಂಗಾತಿ ಇಬ್ಬರೂ ವಿಭಿನ್ನ ವಾತಾವರಣದಲ್ಲಿ ಬೆಳೆದಿರುತ್ತೀರಿ. ಇಬ್ಬರೂ ವಿಭಿನ್ನ ಸ್ವಭಾವವನ್ನು ಹೊಂದಿದ್ದೀರಿ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಮದುವೆಯಾದ ತಕ್ಷಣ ನಿಮ್ಮ ಸಂಗಾತಿಯಲ್ಲಿ ಪರಿಪೂರ್ಣತೆಯನ್ನು ಬಯಸಿದರೆ ನಿಮ್ಮ ಸಂಬಂಧದಲ್ಲಿ ಒತ್ತಡ ಹೆಚ್ಚಾಗಬಹುದು.
ಮದುವೆಯಾಗಿ ಹೊಸದರಲ್ಲಿ ಸಂಗಾತಿ ಮತ್ತು ಕುಟುಂಬದ ನಡುವೆ ಸಮತೋಲನ ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ವಾಸ್ತವವಾಗಿ, ಹೆಚ್ಚಿನವರು ಮದುವೆಯ ನಂತರವೂ ತಮ್ಮ ಆದ್ಯತೆಗಳನ್ನು ಬದಲಾಯಿಸುವುದಿಲ್ಲ, ಇದರಿಂದಾಗಿ ಸಂಬಂಧವು ಹದಗೆಡುವ ಸಾಧ್ಯತೆ ಇರುತ್ತದೆ.
ಮದುವೆಯ ನಂತರ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಪ್ರಯತ್ನಿಸಿ. ಮಹಿಳೆಯರು ವಿಶೇಷವಾಗಿ ಮದುವೆಯ ನಂತರ ಕುಟುಂಬ ಸದಸ್ಯರೊಂದಿಗೆ ಉತ್ತಮ ನಡವಳಿಕೆಯನ್ನು ಇಟ್ಟುಕೊಳ್ಳಬೇಕು. ಆರಂಭದಲ್ಲಿ ನಿಮ್ಮ ನಡವಳಿಕೆ ಹೇಗಿರುತ್ತದೆ ಎಂಬುದರ ಮೇಲೆ ನಿಮ್ಮ ಭವಿಷ್ಯ ನಿಂತಿದೆ. ನಿಮ್ಮ ಇಮೇಜ್ ಅನ್ನು ಕೂಡ ಅದೇ ನಿರ್ಧರಿಸುತ್ತದೆ.