ಮದುವೆಯಾದ ಬಳಿಕ ತನ್ನ ಪತಿ ಜೀನ್ಸ್ ಧರಿಸಲು ಬಿಡಲಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡ ಪತ್ನಿ ಆತನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಜಾರ್ಖಂಡ್ ನ ಜಾಮ್ತಾರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶನಿವಾರದಂದು ಜೋರ್ಬಿತಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪುಷ್ಪಾ ಎಂಬಾಕೆ ಗೋಪಾಲ್ ಪುರ ಗ್ರಾಮದಲ್ಲಿ ನಡೆಯುತ್ತಿದ್ದ ಮೇಳವನ್ನು ವೀಕ್ಷಿಸಲು ಜೀನ್ಸ್ ಧರಿಸಿಕೊಂಡು ತೆರಳಿದ್ದಳು. ಅವಳು ವಾಪಸ್ ಮನೆಗೆ ಬಂದಾಗ ಆಕೆಯ ಪತಿ ಜೀನ್ಸ್ ಧರಿಸಿದ್ದಕ್ಕೆ ಆಕ್ಷೇಪಿಸಿದ್ದಾನೆ.
ಇದರಿಂದಾಗಿ ಪತಿ – ಪತ್ನಿ ನಡುವೆ ವಾಗ್ವಾದ ತಾರಕಕೇರಿದ್ದು, ಪುಷ್ಪಾ ಚಾಕು ತೆಗೆದುಕೊಂಡು ಹೊತ್ತಿಗೆ ಇರಿದಿದ್ದಾಳೆ. ಕೂಡಲೇ ಆತನ ಪೋಷಕರು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಪತಿಯ ತಂದೆ ತನ್ನ ಸೊಸೆ ಪುಷ್ಪಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ಈಗ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.