ಬೆಂಗಳೂರು: ಪ್ರೀತಿ-ಪೇಮದ ಹೆಸರಲ್ಲಿ ಪುಸಲಾಯಿಸಿ, ಮದುವೆಯಾಗುವುದಾಗಿ ನಂಬಿಸಿ ಹಾಸ್ಟೆಲ್ ವಾರ್ಡನ್ ಓರ್ವ ವಿದ್ಯಾರ್ಥಿನಿಗೆ ಮೋಸ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ಹಾಸ್ಟೆಲ್ ನಲ್ಲಿ ನಡೆದಿದೆ.
ವಿದ್ಯಾರ್ಥಿನಿಯೊಂದಿಗೆ ಪ್ರೀತಿ-ಪ್ರೇಮದ ನಾಟಕವಾಡಿ ಸುತ್ತಾಡಲು ಕರೆದೊಯ್ದು ಆಕೆಯೊಂದಿಗೆ ದೈಹಿಕ ಸಂಪರ್ಕವನ್ನೂ ಬೆಳೆಸಿರುವ ಹಾಸ್ಟೆಲ್ ವಾರ್ಡನ್ ವಿದ್ಯಾರ್ಥಿನಿಗೆ ಕೈಕೊಟ್ಟು ಬೇರೊಂದು ಯುವತಿಯೊಂದಿಗೆ ವಿವಾಹಕ್ಕೆ ಸಜ್ಜಾಗಿದ್ದಾನೆ.
ಹಾಸ್ಟೆಲ್ ವಾರ್ಡನ್ ಸತೀಶ್ ಎಂಬಾತನ ವಿರುದ್ಧ ಸಂತ್ರಸ್ತ ವಿದ್ಯಾರ್ಥಿನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ವಿದ್ಯಾರ್ಥಿನಿಯನ್ನು ಮದುವೆಯಾಗುವುದಾಗಿ ನಂಬಿಸಿ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದ ಸತೀಶ್, ಪದೇ ಪದೇ ದೈಹಿಕ ಸಂಪರ್ಕ ಬೆಳೆಸಿ, ಮೂರು ಬಾರಿ ವಿದ್ಯಾರ್ಥಿನಿಗೆ ಅಬಾರ್ಷನ್ ಮಾಡಿಸಿದ್ದಾನೆ ಎನ್ನಲಾಗಿದೆ.
ಮದುವೆಯಾಗುವಂತೆ ವಿದ್ಯಾರ್ಥಿನಿ ಒತ್ತಾಯಿಸುತ್ತಿದ್ದಂತೆ ಮದುವೆಗೆ ನಿರಾಕರಿಸಿರುವ ಆರೋಪಿ ಸತೀಶ್, ತಾನು ಸರ್ಕಾರಿ ನೌಕರಿಯಲ್ಲಿರುವ ಯುವತಿಯನ್ನು ವಿವಾಹವಾಗುವುದಾಗಿ ಹೇಳಿದ್ದಾನೆ. ಅಲ್ಲದೇ ತನಗೆ ರಾಜಕಾರಣಿಗಳ ಕಾಂಟೆಕ್ಟ್ ಇದ್ದು, ವಿಷಯ ಬಾಯ್ಬಿಟ್ಟರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ. ಸಂತ್ರಸ್ತ ವಿದ್ಯಾರ್ಥಿನಿ ಇದೀಗ ಮದ್ದೂರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ.