
ಬಿಹಾರದ ಔರಂಗಾಬಾದ್‌ನಲ್ಲಿ ಹೃದಯ ವಿದ್ರಾವಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರೀತಿಸಿದ ಯುವಕ ಮದುವೆಯಾಗಲು ನಿರಾಕರಿಸಿದ್ದರಿಂದ ಬೇಸತ್ತ ಪ್ರಿಯತಮೆ ಮತ್ತು ಆಕೆಯ ಸ್ನೇಹಿತೆಯರು ವಿಷ ಸೇವಿಸಿದ್ದಾರೆ.
ಈ ಪೈಕಿ ಮೂವರು ಮೃತಪಟ್ಟಿದ್ದು, ಇನ್ನು ಮೂವರ ಸ್ಥಿತಿ ಚಿಂತಾಜನಕವಾಗಿದೆ. ಕಸ್ಮಾ ಪೊಲೀಸ್ ಠಾಣಾ ವ್ಯಾಪ್ತಿಯ ಚಿರೈಲ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಏಕಕಾಲಕ್ಕೆ 6 ಯುವತಿಯರು ವಿಷ ಸೇವಿಸಿದ್ದು, ಇಡೀ ಊರು ಈಗ ಶೋಕ ಸಾಗರದಲ್ಲಿ ಮುಳುಗಿದೆ. ಯುವತಿಯರು ಈ ರೀತಿ ದುಡುಕಿನ ನಿರ್ಧಾರ ತೆಗೆದುಕೊಳ್ಳಲು ಪ್ರೇಮ ಪ್ರಕರಣವೇ ಕಾರಣ ಅನ್ನೋ ಮಾಹಿತಿ ಸಿಕ್ಕಿದೆ. ರಫಿಗಂಜ್ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಮೂವರನ್ನು ಮಗಧ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರಲ್ಲಿ ಒಬ್ಬಳು ತನ್ನ ಸೋದರ ಮಾವನನ್ನು ಪ್ರೀತಿಸುತ್ತಿದ್ದಳಂತೆ. ತನ್ನ ಸ್ನೇಹಿತೆಯರೊಂದಿಗೆ ತೆರಳಿದ್ದ ಆಕೆ ತನ್ನನ್ನು ಮದುವೆಯಾಗುವಂತೆ ಅವನನ್ನು ಕೇಳಿದ್ದಳು. ಆದ್ರೆ ಈ ಪ್ರಸ್ತಾಪವನ್ನು ಆತ ತಿರಸ್ಕರಿಸಿದ್ದ. ಇದರಿಂದ ಮನನೊಂದು ಯುವತಿ ವಿಷ ಸೇವಿಸಿದ್ದಾಳೆ.
ಇದನ್ನು ನೋಡಿದ ಆಕೆಯ ಉಳಿದ ಸ್ನೇಹಿತೆಯರು ಕೂಡ ವಿಷ ಸೇವನೆ ಮಾಡಿದ್ದಾರೆ. ಒಬ್ಬರಾದ ಮೇಲೆ ಒಬ್ಬರಂತೆ ವಿಷ ತೆಗೆದುಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ 6 ಯುವತಿಯರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯ್ತು, ಆದ್ರೆ ಮೂವರು ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ.