ನಟ ಅಲ್ಲು ಅರ್ಜುನ್ ಜೊತೆಯಲ್ಲಿ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಪುಷ್ಪಾ ದಿ ರೈಸ್ ಸಿನಿಮಾ ಬಾಕ್ಸಾಫೀಸಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.
ಈ ಮೂಲಕ ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ತಮ್ಮ ನಟನಾ ಕೌಶಲ್ಯ ಏನು ಎಂಬುದನ್ನು ಅಭಿಮಾನಿಗಳ ಎದುರು ಸಾಬೀತುಪಡಿಸಿದ್ದಾರೆ. ಆದರೆ ಕಿರಿಕ್ ಹುಡುಗಿಯ ವೈಯಕ್ತಿಕ ಜೀವನ ಮಾತ್ರ ಸಾಕಷ್ಟು ಕುತೂಹಲದಿಂದ ಕೂಡಿದೆ. ಈ ಹಿಂದೆ ಸ್ಯಾಂಡಲ್ವುಡ್ ನಟ ರಕ್ಷಿತ್ ಶೆಟ್ಟಿ ಜೊತೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಬಳಿಕ ಸಂಬಂಧ ಮುರಿದುಕೊಂಡಿದ್ದ ರಶ್ಮಿಕಾ ಪ್ರಸ್ತುತ ಅರ್ಜುನ್ ರೆಡ್ಡಿ ಖ್ಯಾತಿಯ ನಟ ವಿಜಯ್ ದೇವರಕೊಂಡ ಜೊತೆಯಲ್ಲಿ ಡೇಟಿಂಗ್ ಮಾಡುತ್ತಿದ್ದಾರೆಂಬ ವದಂತಿ ಇದೆ. ಆದರೆ ರಶ್ಮಿಕಾ ಮಾತ್ರ ವಿಜಯ್ ದೇವರಕೊಂಡರನ್ನು ಆತ್ಮೀಯ ಗೆಳೆಯ ಎಂದು ಹೇಳಿಕೊಂಡಿದ್ದಾರೆ.
ಇನ್ನು ಪ್ರೀತಿ ಎಂದರೇನು..? ತನ್ನ ಸಂಗಾತಿ ಹೇಗಿರಬೇಕು ಎಂಬುದನ್ನ ನಟಿ ರಶ್ಮಿಕಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನನ್ನ ಪ್ರಕಾರ ಪ್ರೀತಿ ಎಂದರೆ ಒಬ್ಬರಿಗೊಬ್ಬರು ನೀಡುವ ಗೌರವ, ಸಮಯ ಹಾಗೂ ನಿಮ್ಮ ಸಂಗಾತಿಯೊಂದಿಗೆ ನೀವೆಷ್ಟು ಸುರಕ್ಷಿತರಾಗಿದ್ದೀರಿ ಎಂಬುದಾಗಿದೆ. ಪ್ರೀತಿ ಎನ್ನುವುದು ಒಂದು ಭಾವನೆಯಾಗಿರೋದ್ರಿಂದ ಅದನ್ನು ವರ್ಣಿಸಲು ಸಾಧ್ಯವಿಲ್ಲ. ಪ್ರೀತಿ ಒಂದು ಕಡೆಯಿಂದ ಮಾತ್ರ ಇರುವುದಲ್ಲ. ಅದು ಇಬ್ಬರ ಕಡೆಯಿಂದಲೂ ಬರಬೇಕು ಎಂದು ಹೇಳಿದರು.
ಮದುವೆ ಯಾವಾಗ ಎಂದು ಕೇಳಲಾದ ಪ್ರಶ್ನೆಗೂ ಇದೇ ವೇಳೆ ಉತ್ತರಿಸಿದ ರಶ್ಮಿಕಾ, ಇದರ ಬಗ್ಗೆ ಏನು ಹೇಳಬೇಕು ಎಂದು ನನಗೆ ತಿಳಿಯುತ್ತಿಲ್ಲ. ಮದುವೆಯಾಗಲು ನಾನಿನ್ನೂ ಚಿಕ್ಕವಳು. ಹೀಗಾಗಿ ನಾನು ಈ ಬಗ್ಗೆ ಆಲೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ ತೆಲುಗು ಸಿನಿ ಇಂಡಸ್ಟ್ರಿಯ ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಲು ಸಿದ್ಧರಿದ್ದಾರೆ. ಮಿಷನ್ ಮಜ್ನು ಸಿನಿಮಾದಲ್ಲಿ ನಟಿ ರಶ್ಮಿಕಾ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.