ತೆಲಂಗಾಣದ ನಲಗೊಂಡ ಎಂಬಲ್ಲಿ ಪ್ರೀತಿಸುವಂತೆ ಪೀಡಿಸ್ತಾ ಇದ್ದ ಯುವಕನೊಬ್ಬ ವಿದ್ಯಾರ್ಥಿನಿಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ಫಾರೆಸ್ಟ್ ಪಾರ್ಕ್‌ನಲ್ಲಿ 21 ವರ್ಷದ ಯುವತಿ ಮೇಲೆ ಆತ ದಾಳಿ ಮಾಡಿದ್ದಾನೆ. ಆರೋಪಿಯನ್ನು ರೋಹಿತ್ ಎಂದು ಗುರುತಿಸಲಾಗಿದ್ದು ಈಗಾಗ್ಲೇ ಪೊಲೀಸರು ಅವನನ್ನು ಬಂಧಿಸಿದ್ದಾರೆ.
ರೋಹಿತ್ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿ. ಬಹಳ ದಿನಗಳಿಂದ್ಲೂ ತನ್ನನ್ನು ಪ್ರೀತಿಸುವಂತೆ ಪದವಿ ವಿದ್ಯಾರ್ಥಿನಿಯೊಬ್ಬಳ ಬೆನ್ನು ಬಿದ್ದಿದ್ದ. ನಿನ್ನೆ ವಿದ್ಯಾರ್ಥಿನಿ ತನ್ನ ಸ್ನೇಹಿತರೊಂದಿಗೆ ಫಾರೆಸ್ಟ್ ಪಾರ್ಕ್‌ಗೆ ತೆರಳಿದ್ಲು. ಅಲ್ಲಿಗೆ ಬಂದಿದ್ದ ರೋಹಿತ್, ಯಾವುದೋ ವಿಚಾರ ಮಾತನಾಡಬೇಕೆಂದು ಅವಳನ್ನು ಪಕ್ಕಕ್ಕೆ ಕರೆದೊಯ್ದಿದ್ದಾನೆ.
ಜೇಬಿನಲ್ಲಿದ್ದ ಚಾಕು ತೆಗೆದು ಆಕೆಗೆ ಮನಬಂದಂತೆ ಇರಿದಿದ್ದಾನೆ. ಯುವತಿ ಜೋರಾಗಿ ಕಿರುಚಿಕೊಂಡಿದ್ದರಿಂದ ಆಕೆಯ ಸ್ನೇಹಿತರು ಸ್ಥಳಕ್ಕೆ ಓಡಿ ಬಂದ್ರು. ಕೂಡಲೇ ಅವಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವಳ ದೇಹಸ್ಥಿತಿ ಸ್ಥಿರವಾಗಿದೆಯೆಂದು ವೈದ್ಯರು ತಿಳಿಸಿದ್ದಾರೆ.
ಯುವತಿಯ ಮುಖ, ಕೈ, ಹೊಟ್ಟೆ, ಕಾಲುಗಳಿಗೆಲ್ಲ ಚಾಕುವಿನಿಂದ ತಿವಿದ ಗಾಯಗಳಾಗಿವೆ. ದೇಹದ ಎಲ್ಲಾ ಭಾಗಗಳಲ್ಲೂ ಆಳವಾದ ಗಾಯಗಳಾಗಿದ್ದು, ನರಗಳೆಲ್ಲ ಕತ್ತರಿಸಿ ಹೋಗಿವೆ ಅಂತಾ ವೈದ್ಯರು ಹೇಳಿದ್ದಾರೆ. ಕಳೆದ 5-6 ತಿಂಗಳುಗಳಿಂದ ರೋಹಿತ್, ಆ ಯುವತಿಯ ಬೆನ್ನು ಬಿದ್ದಿದ್ದ.
ಈ ಬಗ್ಗೆ ಆತನ ಹೆತ್ತವರಿಗೂ ಮಾಹಿತಿ ನೀಡಲಾಗಿತ್ತು. ನಂತರ ವಿದ್ಯಾರ್ಥಿನಿಯ ತಂಟೆಗೆ ಬರುವುದಿಲ್ಲವೆಂದು ಭರವಸೆ ನೀಡಿದ್ದ ರೋಹಿತ್, ಈಗ ಇಂತಹ ನೀಚ ಕೃತ್ಯ ಎಸಗಿದ್ದಾನೆ.