ಹಿಂದೂ ಧರ್ಮದಲ್ಲಿ ಮದುವೆಯ ಆಚರಣೆಗಳನ್ನು ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ಮದುವೆಯು ಕೇವಲ ಎರಡು ವ್ಯಕ್ತಿಗಳ ಮಿಲನ ಮಾತ್ರವಲ್ಲ, ಎರಡು ಕುಟುಂಬಗಳನ್ನು ಬೆಸೆಯುವ ಸಂಪ್ರದಾಯವೂ ಹೌದು. ಎರಡು ಆತ್ಮಗಳನ್ನು ಒಟ್ಟಿಗೆ ತರುವ ದೈವಿಕ ಮತ್ತು ಪವಿತ್ರ ಬಂಧವೆಂದು ಪರಿಗಣಿಸಲಾಗಿದೆ.
ಹಿಂದೂ ಧರ್ಮದಲ್ಲಿ ಮದುವೆಯನ್ನು ಏಳು ಜನ್ಮಗಳ ಒಡನಾಟವೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಗಂಡ ಮತ್ತು ಹೆಂಡತಿ ಪರಸ್ಪರರ ಬಗ್ಗೆ ಬೆಂಬಲ, ಪ್ರೀತಿ ಮತ್ತು ಗೌರವವನ್ನು ಪ್ರತಿಜ್ಞೆ ಮಾಡುತ್ತಾರೆ. ಮದುವೆಯು ಸಮಾಜ, ಸಂಸ್ಕೃತಿ ಮತ್ತು ಧಾರ್ಮಿಕ ಮೌಲ್ಯಗಳೊಂದಿಗೆ ಸಂಬಂಧ ಹೊಂದಿರುವ ಜೀವನದ ಹೊಸ ಆರಂಭವಾಗಿದೆ. ಇದು ಅನೇಕ ಆಚರಣೆಗಳು ಮತ್ತು ಪದ್ಧತಿಗಳನ್ನು ಒಳಗೊಂಡಿರುವ ಒಂದು ಪವಿತ್ರ ಕಾರ್ಯ.
ಮದುವೆಯಲ್ಲಿ ಹಾಗೂ ನಂತರ ವಧು ಯಾವಾಗಲೂ ವರನ ಎಡಭಾಗದಲ್ಲಿ ಕುಳಿತುಕೊಳ್ಳುವುದು ಪ್ರಮುಖ ಸಂಪ್ರದಾಯಗಳಲ್ಲಿ ಒಂದಾಗಿದೆ. ಈ ಆಚರಣೆಯ ಹಿಂದೆ ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ನಂಬಿಕೆಗಳಿವೆ. ವರನ ಎಡಭಾಗದಲ್ಲಿ ವಧುವನ್ನು ಕೂರಿಸುವ ಅಭ್ಯಾಸವು ಅನೇಕ ನಂಬಿಕೆಗಳು ಮತ್ತು ಭಾವನೆಗಳನ್ನು ಒಳಗೊಂಡಿದೆ. ಇದು ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ತಿಳುವಳಿಕೆಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
ಆಕೆ ಯಾವಾಗಲೂ ವರನ ಹೃದಯಕ್ಕೆ ಹತ್ತಿರವಾಗಿರಬೇಕು ಎಂಬ ಕಾರಣಕ್ಕೆ ವಧುವನ್ನು ಎಡಭಾಗದಲ್ಲಿ ಕೂರಿಸಲಾಗುತ್ತದೆ. ಬಲಗೈ ಶಕ್ತಿ ಮತ್ತು ಕರ್ತವ್ಯದ ಸಂಕೇತ. ಅದೇ ರೀತಿ ಎಡಗೈ ಪ್ರೀತಿ ಮತ್ತು ಸೂಕ್ಷ್ಮತೆಯನ್ನು ಸಂಕೇತಿಸುತ್ತದೆ. ಆದ್ದರಿಂದ, ವಧುವನ್ನು ಎಡಭಾಗದಲ್ಲಿ ಕುಳ್ಳಿರಿಸುವ ಮೂಲಕ ನವ ದಂಪತಿ ಮಧ್ಯೆ ಪ್ರೀತಿ ಮತ್ತು ತಿಳುವಳಿಕೆಯನ್ನು ಉತ್ತೇಜಿಸಲಾಗುತ್ತದೆ.
ಶಾಸ್ತ್ರಗಳ ಪ್ರಕಾರ ಸಮೃದ್ಧಿ ದೇವತೆಯಾದ ಲಕ್ಷ್ಮಿದೇವಿಯು ವಿಷ್ಣುವಿನ ಎಡಭಾಗದಲ್ಲಿ ಕುಳಿತಿರುತ್ತಾಳೆ. ಮದುವೆಯಲ್ಲಿ ವಧುವನ್ನು ಲಕ್ಷ್ಮಿದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ವರನನ್ನು ವಿಷ್ಣುವಿನ ರೂಪವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮನೆಯಲ್ಲಿ ಸದಾ ಸುಖ ಮತ್ತು ಸಮೃದ್ಧಿ ಇರಲೆಂದು ಈ ಪದ್ಧತಿಯನ್ನು ಅನುಸರಿಸಲಾಗುತ್ತದೆ.
ಹಿಂದೂ ಧರ್ಮಗ್ರಂಥಗಳ ಪ್ರಕಾರ ಮದುವೆಯ ಸಮಯದಲ್ಲಿ ವಧು, ವರನ ಎಡಭಾಗದಲ್ಲಿ ಕುಳಿತುಕೊಳ್ಳಬೇಕು. ಈ ರೀತಿಯಾಗಿ ವಧುವನ್ನು ಕೂರಿಸುವುದರಿಂದ ಆಕೆಗೆ ರಕ್ಷಣೆ ಸಿಗುತ್ತದೆ ಎಂದು ನಂಬಲಾಗಿದೆ. ಪ್ರಾಚೀನ ಕಾಲದಲ್ಲಿ ರಾಕ್ಷಸರು ಮದುವೆಗೆ ಅಡ್ಡಿಪಡಿಸಿದಾಗ, ವರನು ವಧುವನ್ನು ರಕ್ಷಿಸಲು ತನ್ನ ಬಲಭಾಗದಲ್ಲಿ ಆಯುಧವನ್ನು ಇಡುತ್ತಿದ್ದನು. ಅದಕ್ಕೇ ಮದುಮಗಳು ಎಡಗಡೆ ಕೂರುತ್ತಿದ್ದಳು. ಅಂದಿನಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ.