
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು, ವಧು – ವರನ ಕುಟುಂಬಕ್ಕೆ ಬಾಯಿಗೆ ಬಂದಂತೆ ಉಗಿದಿದ್ದರು. ಹೊಟ್ಟೆ ಹಸಿದುಕೊಂಡ ಬಂದ ವಿದ್ಯಾರ್ಥಿ, ಊಟ ಮಾಡಿದ್ದನ್ನೇ ದೊಡ್ಡ ಸಂಗತಿಯನ್ನಾಗಿ ಮಾಡಿರುವ ನಿಮಗೆ ಒಳ್ಳೆಯದಾಗುತ್ತಾ ಎಂದು ಪ್ರಶ್ನಿಸಿದ್ದರು. ಇದರ ಮಧ್ಯೆ ಮಾನವೀಯತೆಯನ್ನು ಪ್ರದರ್ಶಿಸುವ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿದೆ. ಇದು ಕೂಡ ಮದುವೆ ಸಮಾರಂಭವೆಂಬುದು ಗಮನಾರ್ಹ ಸಂಗತಿ.
ತನಗೆ ಆಹ್ವಾನವಿರದಿದ್ದರೂ ಮದುವೆ ಮನೆಗೆ ಹೋಗಿ ಊಟ ಮಾಡಿದ ವಿದ್ಯಾರ್ಥಿ ನೇರವಾಗಿ ವಧು – ವರರಿದ್ದ ವೇದಿಕೆಗೆ ತೆರಳಿದ್ದಾನೆ. ಅಲ್ಲಿ ವರನೊಂದಿಗೆ ಮಾತನಾಡಿದ ಆತ ನಿಮ್ಮ ಹೆಸರು ನನಗೆ ಗೊತ್ತಿಲ್ಲ. ನಾನೊಬ್ಬ ಹಾಸ್ಟೆಲ್ ವಿದ್ಯಾರ್ಥಿ. ನಿಮ್ಮ ಮದುವೆ ಸಮಾರಂಭಕ್ಕೆ ಬಂದು ಊಟ ಮಾಡಿದ್ದೇನೆ. ಇದರಿಂದ ನಿಮಗೆ ತೊಂದರೆ ಆಯಿತೇ ಎಂದು ಪ್ರಶ್ನಿಸಿದ್ದಾನೆ.
ಮಾನವೀಯ ಗುಣವುಳ್ಳ ಆ ವರ, ವಿದ್ಯಾರ್ಥಿ ಪ್ರಶ್ನೆಗೆ ವಿಚಲಿತಗೊಳ್ಳದೆ ತುಂಬಾ ಸಂತೋಷದಿಂದಲೇ ನೀವು ಬಂದು ಊಟ ಮಾಡಿದ್ದು ಒಳ್ಳೆಯದಾಯಿತು. ನಿಮ್ಮ ಹಾಸ್ಟೆಲ್ ಮೇಟ್ ಗಳಿಗೂ ಸಹ ಊಟವನ್ನು ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾನೆ. ಈ ವಿಡಿಯೋವನ್ನು ಈಗ ಐಎಎಸ್ ಅಧಿಕಾರಿ ಅವನೀಶ್ ಶರಣ್ ಕೂಡ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.