
ಭಾರತ ಸಂಪ್ರದಾಯಗಳಿಗೆ ಹೆಸರುವಾಸಿಯಾದ ದೇಶ. ಅನೇಕ ವೈವಿಧ್ಯತೆಗಳು ಇಲ್ಲಿವೆ. ಭಾರತದಲ್ಲಿ ಮದುವೆಗೆ ವಿಶೇಷ ಸ್ಥಾನಮಾನವಿದೆ. ಬೇರೆ ಬೇರೆ ಸಮಾಜದಲ್ಲಿ ವಿಭಿನ್ನ ಸಂಪ್ರದಾಯಗಳಲ್ಲಿ ಮದುವೆಗಳು ನೆರವೇರುತ್ತವೆ. ಆದರೆ ಮದುವೆಗೂ ಮುನ್ನ ಲಿವ್ ಇನ್‌ನಲ್ಲಿ ಇರಬೇಕೆಂಬ ನಿಯಮ ಛತ್ತೀಸ್‌ಗಢದ ಬಸ್ತಾರ್‌ನಲ್ಲಿದೆ. ಇಲ್ಲಿ ಹುಡುಗ-ಹುಡುಗಿ ಲಿವ್ ಇನ್‌ನಲ್ಲಿ ವಾಸಿಸಿದ ನಂತರವೇ ಮದುವೆ ನಡೆಯುತ್ತದೆ.
ಬುಡಕಟ್ಟು ಜನಾಂಗದವರೇ ಇಲ್ಲಿ ಹೆಚ್ಚಾಗಿ ವಾಸವಿದ್ದಾರೆ. ಮುರಿಯಾ ಅಥವಾ ಮುದಿಯಾ ಬುಡಕಟ್ಟು ಜನಾಂಗಕ್ಕೆ ಸೇರಿದವರು ಮದುವೆಗೆ ಈ ನಿಯಮವನ್ನು ಕಡ್ಡಾಯಗೊಳಿಸಿಕೊಂಡಿದ್ದಾರೆ. ಬಹಳ ವರ್ಷಗಳಿಂದಲೂ ಈ ಪದ್ಧತಿ ರೂಢಿಯಲ್ಲಿದೆ. ಪರಸ್ಪರರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲಿ ಎಂಬ ಕಾರಣಕ್ಕೆ ಲಿವ್-ಇನ್‌ನಲ್ಲಿ ವಾಸಿಸುತ್ತಾರಂತೆ. ಲಿವ್ ಇನ್ ಸಂಬಂಧಕ್ಕೆ ಕುಟುಂಬದ ಸದಸ್ಯರು ಮತ್ತು ಸಮಾಜದ ಬೆಂಬಲವೂ ಇರುತ್ತದೆ.
ಅಷ್ಟೇ ಅಲ್ಲ ಅವರಿಗಾಗಿಯೇ ಘೋಟುಲ್ ಎಂದು ಕರೆಯಲ್ಪಡುವ ತಾತ್ಕಾಲಿಕ ಮನೆಯೊಂದನ್ನೂ ನಿರ್ಮಿಸಲಾಗುತ್ತದೆ. ಈ ಮನೆಯಲ್ಲಿ ಇಬ್ಬರೂ ಕೆಲವು ದಿನಗಳ ಕಾಲ ಒಟ್ಟಿಗೆ ವಾಸಿಸುತ್ತಾರೆ. ಈ ಘೋಟೂಲ್ ಅನ್ನು ಬಿದಿರು ಮತ್ತು ಜೇಡಿಮಣ್ಣಿನಿಂದ ಕಟ್ಟಲಾಗುತ್ತದೆ. ಘೋಟುಲ್ ದೊಡ್ಡ ಅಂಗಳವನ್ನು ಹೊಂದಿರುವ ಮನೆ. ಸ್ಥಳೀಯವಾಗಿ ಇದನ್ನು ಬಿದಿರು ಮತ್ತು ಜೇಡಿಮಣ್ಣಿನಿಂದ ತಯಾರಿಸಲಾಗುತ್ತದೆ.
ಕೆಲವು ದಿನಗಳನ್ನು ಜೊತೆಯಾಗಿ ಕಳೆದ ನಂತರ ಜೀವನ ಸಂಗಾತಿಗಳನ್ನು ಆಯ್ಕೆ ಮಾಡುತ್ತಾರೆ. ಘೋಟುಲ್‌ಗೆ ಹೋಗುವ ಹುಡುಗರನ್ನು ಚೆಲಿಕ್ ಎಂದು ಕರೆಯಲಾಗುತ್ತದೆ ಮತ್ತು ಹುಡುಗಿಯರನ್ನು ಮೋತಿಯಾರಿ ಎಂದು ಕರೆಯಲಾಗುತ್ತದೆ. ಇಂದಿಗೂ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.