ಹಿಂದೊಂದು ಕಾಲವಿತ್ತು. ಮದುವೆಗಿಂತ ಮೊದಲು ಹುಡುಗ-ಹುಡುಗಿ ಮುಖವನ್ನೂ ನೋಡಿಕೊಳ್ತಿರಲಿಲ್ಲ. ಜಾತಕ ನೋಡಿ ಹೊಂದಾಣಿಕೆ ಮಾಡಿ ಮದುವೆ ಮಾಡಲಾಗ್ತಾಯಿತ್ತು. ಆದ್ರೀಗ ಕಾಲ ಬಹಳ ಬದಲಾಗಿದೆ. ಜಾತಕ ನೋಡುವ ಬದಲು ಹುಡುಗ-ಹುಡುಗಿ ಮಾತನಾಡಿಕೊಳ್ತಾರೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡ್ತಾರೆ. ಇಬ್ಬರಿಗೂ ಹೊಂದಾಣಿಕೆಯಾದ್ರೆ ಮದುವೆಯಾಗ್ತಾರೆ.
ಈ ಮಧ್ಯೆ ಮದುವೆಗೂ ಮೊದಲು ಜಾತಕ ನೋಡುವ ಬದಲು ವೈವಾಹಿಕ ಪೂರ್ವ ಪರೀಕ್ಷಾ ಪದ್ಧತಿ ಜಾಸ್ತಿಯಾಗ್ತಿದೆ. ಮದುವೆಗೂ ಮುನ್ನ ಹುಡುಗ ಹಾಗೂ ಹುಡುಗಿ ಮಾಡಿಸಿಕೊಳ್ಳುವ ವೈದ್ಯಕೀಯ ಪರೀಕ್ಷೆ ಇದಾಗಿದೆ. ಮದುವೆಗೂ ಮುನ್ನ ವರ-ವಧು ಪರಸ್ಪರರ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ. ಹಾಗಾಗಿ ಕೆಲವೊಂದು ವೈದ್ಯಕೀಯ ಪರೀಕ್ಷೆಯನ್ನು ಅವಶ್ಯವಾಗಿ ಮಾಡಿಕೊಳ್ಳಬೇಕು.
ಮದುವೆಗೂ ಮುನ್ನ ರಕ್ತದ ಗುಂಪು ತಿಳಿದಿರಬೇಕು. ಹುಡುಗ ಹಾಗೂ ಹುಡುಗಿ ಬ್ಲಡ್ ಗ್ರೂಪ್ ಒಂದು ಧನಾತ್ಮಕ ಇನ್ನೊಂದು ಋಣಾತ್ಮಕವಾಗಿದ್ದರೆ ಹೊಂದಾಣಿಕೆಯಾಗುವುದಿಲ್ಲ. ಹುಟ್ಟುವ ಮಗುವಿಗೆ ಅನಿಮಿಯಾ ಸಮಸ್ಯೆ ಕಾಡುವ ಸಾಧ್ಯತೆಯಿರುತ್ತದೆ. ಮೊದಲೇ ಬ್ಲಡ್ ಗ್ರೂಪ್ ತಿಳಿದಿದ್ದರೆ ಗರ್ಭಿಣಿಯಾದಾಗ ವೈದ್ಯರ ಸಲಹೆ ಪಡೆಯಬಹುದು.
ಮದುವೆಗೂ ಮೊದಲು ಹಿಮೋಗ್ಲೋಬಿನ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಹಿಮೋಗ್ಲೋಬಿನ್ ಉತ್ಪತ್ತಿಯಾಗದೇ ಹೋದಲ್ಲಿ ಸಮಸ್ಯೆ ಎದುರಾಗುತ್ತದೆ. ಮದುವೆ ನಂತ್ರ ಈ ಬಗ್ಗೆ ಗಲಾಟೆ ಮಾಡುವ ಬದಲು ಮೊದಲೇ ಈ ಬಗ್ಗೆ ತಿಳಿದಿರುವುದು ಒಳ್ಳೆಯದು.
ವಧು-ವರರು ವಿ ಡಿ ಆರ್ ಎಲ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಲೈಂಗಿಕ ಸಮಸ್ಯೆ, ರೋಗಗಳಿದ್ದರೆ ಇದ್ರಿಂದ ತಿಳಿಯುತ್ತದೆ. ರೋಗ ಪೀಡಿತ ವ್ಯಕ್ತಿ ಜೊತೆ ಸಂಬಂಧ ಬೆಳೆಸಿದ್ರೆ ಸಂಗಾತಿಗೂ ಇದು ಹರಡುತ್ತದೆ. ಹುಟ್ಟುವ ಮಗುವಿನ ಮೇಲೂ ಇದು ಪರಿಣಾಮ ಬೀರುತ್ತದೆ.
ಹೆಚ್ ಐ ವಿ ಪರೀಕ್ಷೆ ಕೂಡ ಮಾಡಿಸಿಕೊಳ್ಳಬೇಕು. ಹೆಚ್ ಐ ವಿ ಪೀಡಿತ ವ್ಯಕ್ತಿಯನ್ನು ಮದುವೆಯಾಗದಿರುವುದು ಒಳ್ಳೆಯದು.