
ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಬೆಳಿಗ್ಗೆ ಏಳು ಗಂಟೆಯಿಂದ ಮತದಾನ ಆರಂಭವಾಗಿದ್ದು, ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಕಳೆದ ರಾತ್ರಿಯವರೆಗೂ ಮನವೊಲಿಕೆಯ ಕಸರತ್ತಿನಲ್ಲಿ ತೊಡಗಿದ್ದರು. ಚುನಾವಣಾ ಅಧಿಕಾರಿಗಳ ಕಟ್ಟುನಿಟ್ಟಿನ ನಿಗಾದ ಮಧ್ಯೆಯೂ ಹಣ, ಹೆಂಡದ ಹಂಚಿಕೆ ಆಗಿದ್ದು, ಉಡುಗೊರೆಯನ್ನೂ ಸಹ ತಲುಪಿಸಲಾಗಿದೆ.
ವಿಜಯಪುರ ಜಿಲ್ಲೆಯ ವಿಧಾನಸಭಾ ಕ್ಷೇತ್ರ ಒಂದರಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪರ ಮನೆ ಮನೆ ಪ್ರಚಾರ ಮಾಡುವ ವೇಳೆ ಕರಪತ್ರದ ಜೊತೆಗೆ ಕೋಳಿ, ಕುರಿ ಮಾಂಸ ಖರೀದಿಸಲು ಮುಂಗಡವಾಗಿ ಟೋಕನ್ ವಿತರಿಸಿದ್ದಾರೆ ಎನ್ನಲಾಗಿದೆ. ಮತ ಚಲಾವಣೆ ಮಾಡಿದ ಬಳಿಕ ನಿಗದಿಪಡಿಸಿದ ಮಾಂಸದ ಅಂಗಡಿಯಲ್ಲಿ ಟೋಕನ್ ತೋರಿಸಿ ಪಡೆದುಕೊಳ್ಳಬಹುದೆಂದು ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಅಲ್ಲದೆ ಹಣ, ಹೆಂಡ ಹಾಗೂ ಟೋಕನ್ ನೀಡಿದ ಬಳಿಕ ತಮ್ಮ ಅಭ್ಯರ್ಥಿಗೆ ಮತ ನೀಡುವುದನ್ನು ಖಚಿತಪಡಿಸಿಕೊಳ್ಳಲು ಎಲೆ, ಅಡಿಕೆ ಹಾಗೂ ಹಾಲಿನ ಮೇಲೆ ಪ್ರಮಾಣ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಜೊತೆಗೆ ಮತದಾರರನ್ನು ಮತಗಟ್ಟೆಗೆ ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಸಹ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.