ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾನೆ. ಈ ಬಾರಿ ಪಂಜಾಬ್ ಖ್ಯಾತ ಗಾಯಕ ಸಿಧು ಮೂಸೇವಾಲ ಹತ್ಯೆ ಪ್ರಕರಣದಲ್ಲಿ ಈ ಗ್ಯಾಂಗ್ ಸ್ಟರ್ ನ ಹೆಸರು ತಳಕು ಹಾಕಿಕೊಂಡಿದೆ. ಆದರೆ, ವಿಚಿತ್ರವೆಂದರೆ ಈತ ಕಳೆದ ಹತ್ತು ವರ್ಷಗಳಿಂದ ಸ್ವತಃ ಯಾವುದೇ ಕೃತ್ಯ ಮಾಡಿಲ್ಲ. ಆದರೆ, ಕೊಲೆಗೆ ಸಂಬಂಧಿಸಿದಂತೆ ತಂತ್ರಗಾರಿಕೆ ಹೆಣೆದ ಆರೋಪಗಳು ಈತನ ವಿರುದ್ಧ ಕೇಳಿ ಬರುತ್ತಿವೆ. ಈ ಮೂಲಕ ದೇಶದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎಂಬ ಅಪಖ್ಯಾತಿ ಈತನ ಮೇಲಿದೆ.
ಸದ್ಯ ವಿಶೇಷ ದೆಹಲಿ ಪೊಲೀಸ್ ಘಟಕದ ಸುಪರ್ದಿಯಲ್ಲಿರುವ ಬಿಷ್ಣೋಯ್ ನನ್ನು ಮೂಸೇವಾಲ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಆತ ಇದುವರೆಗೆ ಈ ಬಗ್ಗೆ ಯಾವುದೇ ವಿಚಾರಗಳನ್ನು ಹೊರಹಾಕಿಲ್ಲ.
ಈ ಹಿಂದೆ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಹತ್ಯೆ ಬೆದರಿಕೆ ಹಾಕಿದ್ದುದು ಮತ್ತು ಇದಕ್ಕೆ ಯೋಜನೆ ರೂಪಿಸಿದ್ದೆ ಎಂದು ಆತ ಹೇಳಿಕೊಂಡಿದ್ದ. ಅಲ್ಲದೇ, ಹತ್ಯೆಗೈಯ್ಯಲು ಕಳುಹಿಸಿದ್ದ ಈತನ ಸಹಚರ ಸಂಪತ್ ನೆಹ್ರಾ ಎಂಬ ದುಷ್ಕರ್ಮಿಯನ್ನು ದೆಹಲಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಬಿಷ್ಣೋಯ್ ಜೈಲಿನಲ್ಲಿದ್ದುಕೊಂಡೇ ಹರ್ಯಾಣ, ಪಂಜಾಬ್, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ತನ್ನ ಕುಕೃತ್ಯಗಳನ್ನು ನಡೆಸುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.
2010 ರಲ್ಲಿ ನಡೆದ ಪಂಜಾಬ್ ವಿಶ್ವವಿದ್ಯಾಲಯ ಚುನಾವಣೆ ವೇಳೆ ಈತ ಮತ್ತು ಈತನ ಸಹಚರರು ಗಾಳಿಯಲ್ಲಿ ಗುಂಡು ಹಾರಿಸಿ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ಪ್ರಕರಣ ದಾಖಲಾಗಿ ಜೈಲಿಗೆ ಕಳುಹಿಸಲಾಗಿತ್ತು.
ಯಾವುದೇ ಜೈಲಿಗೆ ಹೋದರೂ ಅಲ್ಲಿ ಸಹಖೈದಿಗಳ ಜೊತೆ ಸ್ನೇಹ ಬೆಳೆಸಿ ಅವರಿಗೆ ಎಲ್ಲಾ ಸೌಲಭ್ಯಗಳು ದೊರೆಯುವಂತೆ ಮಾಡುವುದಲ್ಲದೇ, ಅಲ್ಲಿಂದಲೇ ಕುಳಿತು ಹೊರ ಜಗತ್ತಿನಲ್ಲಿ ತನ್ನ ಕುಕೃತ್ಯಗಳನ್ನು ಎಸಗುವುದನ್ನು ಕರಗತ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.