ಹಲವು ತಿರುವುಗಳನ್ನು ಪಡೆದುಕೊಂಡಿದ್ದ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ಈಗ ಅಂತಿಮ ಘಟ್ಟ ತಲುಪಿದೆ. ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದ ಶುಕ್ರವಾರದಂದು ಅನಿರೀಕ್ಷಿತ ಅಭ್ಯರ್ಥಿಯಾಗಿ ರಾಜ್ಯಸಭಾ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಅತ್ಯುನ್ನತ ಸ್ಥಾನ ಮತ್ತೊಮ್ಮೆ ಕನ್ನಡಿಗನಿಗೆ ಒಲಿಯಲಿದೆಯಾ ಎಂಬ ಕುತೂಹಲ ಮೂಡಿದೆ.
ಈ ಹಿಂದೆ ಕರ್ನಾಟಕ ಮೂಲದ ನಿಜಲಿಂಗಪ್ಪನವರು ಎಐಸಿಸಿ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿದಿದ್ದು, ಇದೀಗ ಚುನಾವಣಾ ಕಣಕ್ಕಿಳಿದಿರುವ ಮಲ್ಲಿಕಾರ್ಜುನ ಖರ್ಗೆಯವರು ಆಯ್ಕೆಯಾದರೆ ಈ ಸ್ಥಾನಕ್ಕೇರಿದ ಮತ್ತೊಬ್ಬ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಎಐಸಿಸಿ ಅಧ್ಯಕ್ಷ ಚುನಾವಣೆಗೆ ಶಶಿ ತರೂರ್ ಹಾಗೂ ಕೆ.ಎನ್. ತ್ರಿಪಾಠಿ ಸಹ ಸ್ಪರ್ಧಿಸಿದ್ದಾರೆ.
ಆದರೆ ಮೂಲಗಳ ಪ್ರಕಾರ ಗಾಂಧಿ ಕುಟುಂಬದ ಬೆಂಬಲ ಹೊಂದಿರುವ ಮಲ್ಲಿಕಾರ್ಜುನ ಖರ್ಗೆಯವರ ಆಯ್ಕೆ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಅಲ್ಲದೆ ಕಾಂಗ್ರೆಸ್ ನಲ್ಲಿ ಬಂಡಾಯದ ಬಾವುಟ ಬೀಸಿದ್ದ ಬಹುತೇಕ ನಾಯಕರು ಮಲ್ಲಿಕಾರ್ಜುನ ಖರ್ಗೆಯವರನ್ನು ಬೆಂಬಲಿಸುತ್ತಿದ್ದಾರೆ. ಹೀಗಾಗಿ ಇವರ ಆಯ್ಕೆ ನಿಶ್ಚಿತ ಎನ್ನಲಾಗುತ್ತಿದ್ದು, ಕಾದು ನೋಡಬೇಕಿದೆ.