ತನ್ನ ಪ್ರಿಯತಮೆ ಮದುವೆ ಮತ್ತೊಬ್ಬನೊಂದಿಗೆ ನಡೆದಿದೆ ಎಂಬ ಕಾರಣಕ್ಕೆ ಯುವಕನೊಬ್ಬ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಜೀವನ್ಮರಣದ ಸ್ಥಿತಿಯಲ್ಲಿರುವ ಯುವಕನನ್ನು ಈಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣದ ವಿವರ: ಮೂಲತಃ ಉತ್ತರಪ್ರದೇಶದ ಮಹಾರಾಜ ಗಂಜ್ ನವನಾದ ಈ ಯುವಕ ಜೀವನೋಪಾಯಕ್ಕಾಗಿ ಹೈದರಾಬಾದಿಗೆ ಬಂದು ನೆಲೆಸಿದ್ದ. ಆದರೆ ಈತ ತನ್ನ ಊರಿನ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.
ಈತ ಹೈದರಾಬಾದಿಗೆ ಬಂದ ಬಳಿಕ ಪ್ರಿಯತಮೆಯ ವಿವಾಹ ಮತ್ತೊಬ್ಬನೊಂದಿಗೆ ನಿಶ್ಚಯವಾಗಿದೆ. ಇದರಿಂದ ನೊಂದ ಯುವಕ ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದು, ಆದರೆ ಆಕೆ ಕರೆ ಸ್ವೀಕರಿಸಿಲ್ಲ. ಇದರಿಂದಾಗಿ ಯುವಕ ಮತ್ತಷ್ಟು ಹತಾಶೆಗೊಂಡಿದ್ದಾನೆ.
ಅಂತಿಮವಾಗಿ ಆತ್ಮಹತ್ಯೆ ನಿರ್ಧಾರಕ್ಕೆ ಬಂದ ಈತ ಫೇಸ್ಬುಕ್ ಲೈವ್ ಗೆ ಬಂದಿದ್ದು, ತನ್ನ ನೋವನ್ನು ಹೇಳಿಕೊಂಡಿದ್ದಾನೆ. ಬಳಿಕ ಗ್ರೈಂಡರ್ ಬ್ಲೇಡ್ ತೆಗೆದುಕೊಂಡು ತನ್ನ ಕತ್ತನ್ನು ಸೀಳಿಕೊಂಡಿದ್ದಾನೆ. ಇದನ್ನು ಫೇಸ್ಬುಕಲ್ಲಿ ನೋಡಿದ ಸ್ನೇಹಿತರು ಕೂಡಲೇ ಯುವಕನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಯುವಕನ ಕೃತ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.