ಭಾರತದ ಬ್ಯಾಂಕ್ ಗಳಿಗೆ ಈಗಾಗಲೇ ಸಾವಿರಾರು ಕೋಟಿ ರೂಪಾಯಿಗಳನ್ನು ವಂಚಿಸಿ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಮೊದಲಾದವರು ವಿದೇಶಕ್ಕೆ ಪರಾರಿಯಾಗಿದ್ದಾರೆ. ಇದರ ಮಧ್ಯೆ ಮತ್ತೊಂದು ಬೃಹತ್ ಬ್ಯಾಂಕಿಂಗ್ ವಂಚನೆ ಪ್ರಕರಣವನ್ನು ಸಿಬಿಐ ಬಯಲಿಗೆಳೆದಿದ್ದು, ಗೃಹ ಸಾಲ ನೀಡುವ ಫೈನಾನ್ಸ್ ಕಂಪನಿ DHFL ಬರೋಬ್ಬರಿ 34,615 ಕೋಟಿ ರೂಪಾಯಿಗಳನ್ನು ವಿವಿಧ ಬ್ಯಾಂಕುಗಳಿಗೆ ವಂಚಿಸಿದೆ ಎಂದು ಹೇಳಲಾಗಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 17 ಬ್ಯಾಂಕುಗಳಿಂದ 2010-18 ರ ಅವಧಿಯಲ್ಲಿ DHFL ಒಟ್ಟು 42,871 ಕೋಟಿ ರೂಪಾಯಿಗಳ ಸಾಲ ಪಡೆದಿದ್ದು, ಆದರೆ ಈ ಪೈಕಿ ಬಹುತೇಕ ಹಣವನ್ನು ನಕಲಿ ದಾಖಲೆ ಸೃಷ್ಟಿಸುವ ಮೂಲಕ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ ಎಂಬ ಸಂಗತಿ ತನಿಖೆ ವೇಳೆ ಕಂಡುಬಂದಿದೆ. 34,615 ಕೋಟಿ ರೂಪಾಯಿಗಳನ್ನು ಬ್ಯಾಂಕುಗಳಿಗೆ ಮರುಪಾವತಿಸಿದ ವಂಚಿಸಿರುವುದು ಪತ್ತೆಯಾಗಿದೆ.
ಕಂಪನಿಯ ನಿರ್ದೇಶಕರು ವೈಯಕ್ತಿಕ ಲಾಭಕ್ಕೆ ಸಾಲದ ಹಣವನ್ನು ಬಳಸಿಕೊಂಡಿದ್ದು, ಈ ಹಣದಲ್ಲಿ ಭೂಮಿ ಮತ್ತು ಇತರೆ ಆಸ್ತಿ ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಆ ನಂತರ ಸಾಲವನ್ನು ಅನುತ್ಪಾದಕ ಆಸ್ತಿ ಎಂದು ಬ್ಯಾಂಕುಗಳಿಗೆ ತೋರಿಸುವ ಮೂಲಕ ವಂಚನೆ ನಡೆಸಲಾಗಿದೆ. 2019ರಲ್ಲೇ ಖಾಸಗಿ ಸುದ್ದಿವಾಹಿನಿಯೊಂದು ಈ ಹಗರಣದ ಕುರಿತು ಸುಳಿವು ನೀಡಿತ್ತಾದರೂ ಇದೀಗ ವಂಚನೆ ಗಳಾದ ಬ್ಯಾಂಕ್ಗಳು ದೂರು ನೀಡಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ ವಂಚನೆಯನ್ನು ಬಯಲಿಗೆಳೆದಿದೆ.