ಬೆಂಗಳೂರು: ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮತ್ತೆ ಬೀದಿಗಿಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ. ಕಳೆದ 2021ರ ಏಪ್ರಿಲ್‌ನಲ್ಲಿ ನೌಕರರು 15 ದಿನಗಳ ಕಾಲ ಮುಷ್ಕರ ನಡೆಸಿದ್ದರು. ಮಾತುಕತೆ ನಡೆಸಿದ್ದ ಸರ್ಕಾರ ಇಲ್ಲಿಯವರೆಗೆ ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ಮತ್ತೆ ರಸ್ತೆಗೆ ಇಳಿಯಲು ಸಾರಿಗೆ ನೌಕರರು ತಯಾರಾಗಿದ್ದಾರೆ.
ಹೌದು, ಮಂಗಳವಾರ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಹಿಂದೇಟು ಹಾಕುತ್ತಿರುವ ಬೆನ್ನಲ್ಲೇ ಧರಣಿ ಸತ್ಯಾಗ್ರಹ ನಡೆಸಲು ಪ್ಲ್ಯಾನ್ ಮಾಡಿದ್ದಾರೆ ಸಾರಿಗೆ ನೌಕರರು. ಪ್ರತಿಭಟನೆಗೆ ಕೆ.ಎಸ್.ಆರ್.ಟಿ.ಸಿ ಸ್ಟಾಪ್ ಹಾಗೂ ವರ್ಕರ್ಸ್ ಫೆಡರೇಷನ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್, ಕೆ.ಎಸ್.ಆರ್.ಟಿ.ಸಿ ಹಾಗೂ ಬಿ.ಎಂ.ಟಿ.ಸಿ ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್, ಕೆ.ಎಸ್.ಆರ್.ಟಿ.ಸಿ ಹಾಗೂ ಎಸ್‌ಟಿ ಎಂಪ್ಲಾಯೀಸ್ ಯೂನಿಯನ್, ಕ.ರಾ.ರ.ಸಾ ಸಂಸ್ಥೆ ಪ.ಜಾ-ಪ.ಪಂಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘಗಳು ಬೆಂಬಲವನ್ನು ನೀಡಲಿವೆಯಂತೆ.
6 ವರ್ಷಗಳು ಕಳೆದರೂ ಸಾರಿಗೆ ನೌಕರರಿಗೆ ಸರ್ಕಾರ ವೇತನ ಹೆಚ್ಚಳ ಮಾಡಿಲ್ಲ. ಪದೇ ಪದೇ ಸರ್ಕಾರದ ಮುಂದೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ರಾಜ್ಯ ಸಾರಿಗೆ ನೌಕರರು ಮತ್ತೆ ಸಿಡಿದಿದ್ದಾರೆ. ಹಿಂದೆ ನಡೆದ ಪ್ರತಿಭಟನೆಯಲ್ಲಿ ದೊಡ್ಡ ಮಟ್ಟದ ಹೊಡೆತ ಸರ್ಕಾರಕ್ಕೆ ಬಿದ್ದಿತ್ತು. ಈಗ ಮತ್ತೆ ನೌಕರರು ಬೀದಿಗಿಳಿಯುತ್ತಿರೋದ್ರಿಂದ ಸರ್ಕಾರ ಅಷ್ಟರೊಳಗಾಗಿ ಬೇಡಿಕೆ ಈಡೇರಿಸಲು ಮುಂದಾಗಬೇಕಿದೆ.