90ರ ದಶಕದಲ್ಲಿ ಮಕ್ಕಳನ್ನು ನೆಚ್ಚಿನ ಧಾರಾವಾಹಿ ಎಂದರೆ ‘ಶಕ್ತಿಮಾನ್’. ಈ ಸೂಪರ್ ಹೀರೋ ಶೋನಲ್ಲಿ ಮುಖೇಶ್ ಖನ್ನಾ ಶಕ್ತಿಮಾನ್ ಪಾತ್ರವನ್ನು ನಿರ್ವಹಿಸಿದ್ದರು. ಸದ್ಯದಲ್ಲೇ ಶಕ್ತಿಮಾನ್ ಎರಡನೇ ಸೀಸನ್ನೊಂದಿಗೆ ಪುನರಾವರ್ತನೆಯಾಗಬಹುದು ಎಂಬ ವರದಿಗಳಿತ್ತು. ಆದ್ರೆ ಶಕ್ತಿಮಾನ್ ಬಗ್ಗೆ ಮುಖೇಶ್ ಖನ್ನಾ ಖುದ್ದಾಗಿ ಕೆಲವು ಸೀಕ್ರೆಟ್ಗಳನ್ನು ಬಹಿರಂಗಪಡಿಸಿದ್ದಾರೆ.
ಮುಖೇಶ್ ಖನ್ನಾ ಅವರೇ ಹೇಳಿರೋ ಪ್ರಕಾರ ಶಕ್ತಿಮಾನ್ ಮತ್ತೆ ಧಾರಾವಾಹಿ ರೂಪದಲ್ಲಿ ತೆರೆಯ ಮೇಲೆ ಬರುತ್ತಿಲ್ಲ. ಬದಲಾಗಿ ಸಿನೆಮಾ ರೂಪದಲ್ಲಿ ಮಕ್ಕಳನ್ನು ರಂಜಿಸಲಿದೆ. ಇದಕ್ಕಾಗಿ ಮುಖೇಶ್ ಖನ್ನಾ ಸೋನಿ ಪಿಕ್ಚರ್ಸ್ ಜೊತೆ ಕೈ ಜೋಡಿಸಿದ್ದಾರೆ. ಶಕ್ತಿಮಾನ್ ಬಿಗ್ ಬಜೆಟ್ ಚಿತ್ರ. ಸುಮಾರು 300 ಕೋಟಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗ್ತಿದೆ. ಶಕ್ತಿಮಾನ್ ಚಿತ್ರಕ್ಕಾಗಿ ಮುಖೇಶ್ ಖನ್ನಾ ವಿಶಿಷ್ಟ ಕಥೆಯನ್ನು ಸಿದ್ಧಪಡಿಸಿದ್ದಾರಂತೆ.
ನಿರ್ದೇಶಕರು ಅದನ್ನು ಬದಲಾಯಿಸಬಾರದು ಅನ್ನೋದು ಅವರ ಷರತ್ತಂತೆ. ದೂರದರ್ಶನದಲ್ಲಿ ಶನಿವಾರ ಬೆಳಗ್ಗೆ ಮತ್ತು ಮಂಗಳವಾರ ರಾತ್ರಿ ಶಕ್ತಿಮಾನ್ ಧಾರಾವಾಗಿ ಪ್ರಸಾರವಾಗುತ್ತಿತ್ತು. ಇದಕ್ಕಾಗಿ ದೂರದರ್ಶನಕ್ಕೆ ಅವರು 3.80 ಲಕ್ಷ ರೂಪಾಯಿ ಪಾವತಿಸುತ್ತಿದ್ದರು. ಭಾನುವಾರ ಧಾರಾವಾಹಿ ಪ್ರಸಾರ ಆರಂಭಿಸಿದಾಗ ಶುಲ್ಕವನ್ನು 7.80 ಲಕ್ಷಕ್ಕೆ ಹೆಚ್ಚಿಸಲಾಯ್ತು.
ಬಳಿಕ 10.80 ಲಕ್ಷಕ್ಕೆ ಮೊತ್ತ ಏರಿಕೆಯಾಗಿತ್ತು. ಅದಾದ ಬಳಿಕ ಶುಲ್ಕವನ್ನು 16 ಲಕ್ಷಕ್ಕೆ ಏರಿಸಲು ಚಿಂತನೆ ನಡೆದಿತ್ತಂತೆ. ಅದನ್ನು ಭರ್ತಿ ಮಾಡಲು ಅಸಾಧ್ಯ ಎಂಬ ಕಾರಣಕ್ಕೆ ಮುಖೇಶ್ ಖನ್ನಾ ಧಾರಾವಾಹಿ ಪ್ರಸಾರವನ್ನೇ ನಿಲ್ಲಿಸಿದ್ದರು.