ಕಾಂಗ್ರೆಸ್ ನಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ಸಿ.ಪಿ. ಯೋಗೇಶ್ವರ್, ಪಕ್ಷಗಳನ್ನು ಹಲವು ಬಾರಿ ಬದಲಿಸಿದ ಬಳಿಕ ಈಗ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿಯವರ ವಿರುದ್ಧ ಪರಾಭವಗೊಂಡಿದ್ದ ಅವರನ್ನು ಬಿಜೆಪಿ ಪರಿಷತ್ ಸದಸ್ಯರನ್ನಾಗಿ ಮಾಡಿದ್ದರೂ ಮಂತ್ರಿ ಸ್ಥಾನ ನೀಡಿಲ್ಲ.
ರಾಜ್ಯದಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿಕೂಟ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾದವರ ಪೈಕಿ ಮುಂಚೂಣಿಯಲಿದ್ದ ಸಿ.ಪಿ. ಯೋಗೇಶ್ವರ್ ಸಹಜವಾಗಿಯೇ ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದರು. ಆದರೆ ಅವರ ಆಸೆ ಈವರೆಗೂ ಕೈಗೂಡಿಲ್ಲ.
ಹೀಗಾಗಿ ಬಿಜೆಪಿ ನಾಯಕರ ವಿರುದ್ಧ ಯೋಗೇಶ್ವರ್ ಮುನಿಸಿಕೊಂಡಿದ್ದು, ಹೀಗಾಗಿಯೇ ರಾಮನಗರದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಚಿವರುಗಳು ಆಗಮಿಸಿದರೂ ಪಾಲ್ಗೊಳ್ಳುತ್ತಿಲ್ಲ ಎನ್ನಲಾಗಿದೆ. ಯೋಗೇಶ್ವರ್ ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕದಲ್ಲಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗುವ ಚಿಂತನೆಯಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.