ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಸಂಪುಟ ವಿಸ್ತರಣೆಯ ಗಡಿಬಿಡಿಯಲ್ಲಿದ್ದು, ಇದಾದ ಬಳಿಕ ಈ ಹಿಂದೆ ಬಿಜೆಪಿ ಸರ್ಕಾರ ಜಾರಿ ಮಾಡಿದ್ದ ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಸೇರಿದಂತೆ ಹಲವು ಕಾಯ್ದೆಗಳ ತಿದ್ದುಪಡಿಗೆ ನಿರ್ಧರಿಸಿದೆ.
ಈ ಕುರಿತಂತೆ ಬೆಂಗಳೂರಿನಲ್ಲಿ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಹಲವು ಜನವಿರೋಧಿ ಕಾಯ್ದೆಗಳನ್ನು ಜಾರಿ ಮಾಡಲಾಗಿದೆ. ನಮ್ಮ ಪಕ್ಷದ ನಿಲುವಿಗೆ ವಿರುದ್ಧವಾಗಿ ಮತಾಂತರ ನಿಷೇಧ, ಗೋ ಹತ್ಯೆ ನಿಷೇಧ ಮೊದಲಾದವು ಜಾರಿಯಾಗಿದ್ದು, ಇವುಗಳನ್ನು ವಾಪಸ್ ಪಡೆದು ಪರಿಷ್ಕರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆಯಲ್ಲೂ ಸಹ ಹಲವು ಲೋಪದೋಷಗಳಾಗಿದ್ದು, ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಸರ್ಕಾರ ಮುಂದಿನ ದಿನಗಳಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.