ರಾಜಕೀಯ ಪಕ್ಷಗಳ ಭರ್ಜರಿ ಪ್ರಚಾರಗಳ ನಡುವೆಯೇ ಮತದಾರರ ಜಾಗೃತಿ ಪ್ರಚಾರ ಕೂಡ ಸದ್ದಿಲ್ಲದೇ ನಡೆಯುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಮತದಾರ ಮತಗಟ್ಟೆಗೆ ಬಂದು ಮತದಾನ ಮಾಡುವುದೇ ಕಷ್ಟವಾಗುತ್ತಿದೆ. ಸ್ಥಳೀಯ ಸಂಸ್ಥೆಗಳನ್ನು ಬಿಟ್ಟರೆ ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆಗಳಲ್ಲಿ ಮತದಾನವಾಗುತ್ತಿರುವುದು ತುಂಬಾ ಕಡಿಮೆಯಾಗುತ್ತಿದೆ.
ಸಾಮಾನ್ಯವಾಗಿ ಶೇಕಡ 60ರಿಂದ 70ರವರೆಗೆ ಮತದಾನವಾಗುತ್ತಿದೆ. ಎಲ್ಲೋ ಕೆಲವು ಕಡೆ ಮಾತ್ರ 75ರ ಹತ್ತಿರ ಹೋಗಬಹುದು. ಶೇಕಡ 80ರಷ್ಟು ಮತದಾನವಾಗಿದ್ದು ಇಲ್ಲವೇ ಇಲ್ಲ ಎನ್ನಬಹುದು. ಶೇ. 40 ರಷ್ಟು ಮತದಾರರು ಮತದಾನದಿಂದ ಹೊರಗೆ ಉಳಿಯುತ್ತಿದ್ದಾರೆ. ಇದನ್ನು ಮನಗಂಡ ಚುನಾವಣಾ ಆಯೋಗ ಮತದಾನ ಜಾಗೃತಿಗಾಗಿ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.
ಶಿವಮೊಗ್ಗದಲ್ಲಿಯೂ ಕೂಡ ಮತದಾನ ಜಾಗೃತಿ ನಡೆಯುತ್ತಿದೆ. ವಿಶೇಷವಾಗಿ ಮಹಾನಗರ ಪಾಲಿಕೆ ವತಿಯಿಂದ ಮತದಾನ ಜಾಗೃತಿ ಕಳೆದ ಹಲವು ದಿನಗಳಿಂದ ಇಡೀ ನಗರದಾದ್ಯಂತ ನಡೆಯುತ್ತಿದೆ.
ಜಿಲ್ಲಾಡಳಿತದ ಸ್ವೀಪ್ ಕಮಿಟಿಯೊಂದಿಗೆ ಪಾಲಿಕೆ ತಂಡವೂ ಸೇರಿಕೊಂಡು ತನ್ನದೇ ಆದ ರೀತಿಯಲ್ಲಿ ಪಾಲಿಕೆಯ ಎಲ್ಲಾ ವಾರ್ಡ್ ಗಳಲ್ಲಿ ಆಯುಕ್ತ ಮಾಯಣ್ಣ ಗೌಡ ಅವರ ಮಾರ್ಗದರ್ಶನದಲ್ಲಿ ಪಾಲಿಕೆ ಸ್ವೀಪ್ ತಂಡ ಭರ್ಜರಿಯಾಗಿಯೇ ಮತದಾನ ಜಾಗೃತಿ ಮೂಡಿಸುತ್ತಿದೆ.
ವಿಶೇಷವಾಗಿ ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಎಲ್ಲೆಲ್ಲಿ ಮತದಾನ ಕಡಿಮೆಯಾಗಿತ್ತೋ ಆಯಾ ಪ್ರದೇಶಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.
ಆಸ್ಪತ್ರೆಗಳು, ಉದ್ಯಾನವನಗಳು, ಹೋಟೆಲ್ ಗಳು, ಬಸ್ ನಿಲ್ದಾಣ, ರೈಲು ನಿಲ್ದಾಣ, ಎಪಿಎಂಸಿ, ಕಾರ್ಮಿಕರು ದುಡಿಯುವ ಸ್ಥಳಗಳು, ಜನನಿಬಿಡ ವೃತ್ತಗಳು, ಕ್ರೀಡಾಂಗಣಗಳು, ಹೀಗೆ ಎಲ್ಲಾ ಕಡೆ ಮತದಾನ ಜಾಗೃತಿಯನ್ನು ಈಗಾಗಲೇ ಪಾಲಿಕೆ ಸ್ವೀಪ್ ಸಮಿತಿ ಮಾಡಿಕೊಂಡು ಬಂದಿದೆ.
ಕ್ರಿಕೆಟ್ ಆಡಿಸುವ ಮೂಲಕ, ಮಹಿಳೆಯರಿಗೆ ರಂಗೋಲಿ ಸೇರಿದಂತೆ ಇತರೆ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಬೀದಿ ನಾಟಕಗಳನ್ನು ಆಡಿಸಿ ಆ ಮೂಲಕ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ ವಿವಿಧ ಕಾಲೇಜುಗಳಲ್ಲಿ ಇದೇ ಮೊದಲ ಬಾರಿಗೆ ಮತದಾನದ ಅರ್ಹತೆ ಪಡೆದ ಯುವಕರು, ಯುವತಿಯರು ಮತಗಟ್ಟೆಗೆ ಬರುವಂತೆ ಜಾಗೃತಿ ಮೂಡಿಸಲಾಗುತ್ತಿದೆ.
ವಾಕ್ ಥಾನ್, ಮ್ಯಾಕ್ ಥಾನ್, ಜಾಥಾಗಳು, ಸೈಕಲ್ ಜಾಥಾ, ಮುಂತಾದ ಕಾರ್ಯಕ್ರಮಗಳ ಮೂಲಕವೂ ಕೂಡ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ವಿಶೇಷವಾಗಿ ಶಾಲಾ, ಕಾಲೇಜುಗಳಲ್ಲಿ ಮತದಾನ ಕುರಿತಂತೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿ ಅದರಲ್ಲಿ ಗೆದ್ದವರಿಗೆ ಬಹುಮಾನ ನೀಡುವುದರ ಮೂಲಕ ಮತ್ತು ಕ್ರೀಡಾ ಕೂಟದಲ್ಲಿ ಭಾಗವಹಿಸುವವರಿಗೆ ಮತದಾನದ ಜಾಗೃತಿ ಇರುವ ಟೀ ಶರ್ಟ್ ಗಳನ್ನು ನೀಡುವ ಮೂಲಕ ಮತ್ತು ಯುವತಿಯರಿಗೆ ನೃತ್ಯ ಸ್ಪರ್ಧೆ ಏರ್ಪಡಿಸುವ ಮೂಲಕ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿ ಮತದಾನ ಜಾಗೃತಿಯ ಪಾಲಿಕೆ ಸ್ವೀಪ್ ತಂಡ ಮೂಡಿಸುತ್ತಿದೆ.
ಇದಲ್ಲದೇ ಬಹಳ ಮುಖ್ಯವಾಗಿ ಲಿಂಗತ್ವ ಅಲ್ಪಸಂಖ್ಯಾತರಲ್ಲಿಯೂ ಮತದಾನ ಮಾಡಬೇಕೆಂದು ವಿನಂತಿಸುವುದರ ಜೊತೆಗೆ ಮತದಾನದ ಮಹತ್ವ ತಿಳಿಸಲಾಗುತ್ತಿದೆ. ಜೊತೆಗೆ ಎಲ್ಲೆಲ್ಲಿ ಅಲೆಮಾರಿಗಳ ಮತಗಳಿರುತ್ತವೆಯೋ ಅಲ್ಲಿಯೂ ಕೂಡ ಅಧಿಕಾರಿಗಳು ತೆರಳಿ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ. ಇದರ ಜೊತೆಗ ಸಂತೆ ನಡೆಯುವ ಜಾಗದಲ್ಲೂ ಕೂಡ ತಪ್ಪದೇ ಮತದಾನ ಮಾಡುವಂತೆ ವಿನಂತಿಸಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಅಧಿಕಾರಿಗಳು ಮನೆ ಮನೆಗೂ ತೆರಳಿ ಕೆಲವು ಕಡೆ ಪ್ರತಿಜ್ಞಾವಿಧಿ ಬೋಧಿಸಲಾಗುತ್ತಿದೆ.
ಈ ಬಾರಿಯ ಯುಗಾದಿ ಮತ್ತು ರಂಜಾನ್ ಹಾಗೂ ಕಾರ್ಮಿಕ ದಿನಾಚರಣೆಯ ವಿಶೇಷ ದಿನಗಳಲ್ಲಿ ಪಾಲಿಕೆಯ ಎಲ್ಲಾ ವಾರ್ಡ್ ಗಳು, ಮಸೀದಿ, ಮಂದಿರ, ಚರ್ಚ್ ಗಳಲ್ಲಿಯೂ ಅರಿವು ಮೂಡಿಸಲಾಯಿತು. ಬೀದಿ ವ್ಯಾಪಾರಿಗಳಿಗೂ ಜಾಗೃತಿ ಮೂಡಿಸಲಾಗಿದೆ.
ಮಹಾನಗರ ಪಾಲಿಕೆಯ ಸ್ವೀಪ್ ತಂಡದಲ್ಲಿ ಆಯುಕ್ತ ಮಾಯಣ್ಣಗೌಡ ಅವರ ಜೊತೆಗೆ ನೋಡೆಲ್ ಅಧಿಕಾರಿಗಳಾದ ಅನುಪಮಾ, ಸುಪ್ರಿಯಾ, ರತ್ನಾಕರ್, ಆರೀಫ್, ರೇಣು, ಗೀತಾ, ಉಷಾ, ಯಶಸ್ವಿನಿ, ಶಾಂತಿ, ಸೇರಿದಂತೆ ಹಲವರಿದ್ದಾರೆ.