ಮಣ್ಣು ಕುಸಿತದಿಂದ ತನ್ನ ಪ್ರಾಣ ರಕ್ಷಣೆಗಾಗಿ ಫ್ರಿಡ್ಜ್ ನಲ್ಲಿ ಆಶ್ರಯ ಪಡೆದ 11 ವರ್ಷದ ಬಾಲಕನೊಬ್ಬ ಪವಾಡಸದೃಶನಾಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಫಿಲಿಪೈನ್ಸ್‌ನಲ್ಲಿ ನಡೆದಿದೆ.
ಸಿಜೆ ಜಾಸ್ಮೆ ಎಂದು ಗುರುತಿಸಲ್ಪಟ್ಟ ಬಾಲಕನನ್ನು ಫಿಲಿಪೈನ್ಸ್ ಕೋಸ್ಟ್ ಗಾರ್ಡ್ ಮತ್ತು ರಕ್ಷಣಾ ತಂಡವು ಜೀವಂತವಾಗಿ ಪತ್ತೆಹಚ್ಚಿದೆ. ಉಷ್ಣವಲಯದ ಚಂಡಮಾರುತ ಮೆಗಿಯಿಂದ ಉಂಟಾದ ಮಣ್ಣಿನ ಕುಸಿತದಿಂದ ಜಾಸ್ಮೆ ಪವಾಡಸದೃಶನಾಗಿ ಬದುಕುಳಿದಿದ್ದಾನೆ.
ಫಿಲಿಪೈನ್ಸ್ ನ ಬೇಬೇ ಸಿಟಿಯಲ್ಲಿರುವ ಜಾಸ್ಮೆ ಎಂಬುವವರ ಮನೆ ಸಂಪೂರ್ಣವಾಗಿ ನಾಶವಾಗಿದೆ. ಅವರ ತಾಯಿ ಮತ್ತು ಕಿರಿಯ ಸಹೋದರರು ಇನ್ನೂ ಕಾಣೆಯಾಗಿದ್ದಾರೆ.
ಮಣ್ಣಿನ ಕುಸಿತದ ಸಮಯದಲ್ಲಿ ಬಾಲಕ ಜಾಸ್ಮೆ ರೆಫ್ರಿಜರೇಟರ್‌ನೊಳಗೆ ಸೇರಿಕೊಂಡಿದ್ದಾನೆ. 20 ಗಂಟೆಗಳ ನಂತರ ಆತನನ್ನು ಫ್ರಿಡ್ಜ್‌ನಿಂದ ರಕ್ಷಿಸಲಾಗಿದೆ. ಮಣ್ಣಿನ ಕುಸಿತದಿಂದ ಬಾಲಕ ಸ್ವಲ್ಪ ಗಾಯಗೊಂಡಿದ್ದಾನೆ.
ಕೋಸ್ಟ್ ಗಾರ್ಡ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ರಕ್ಷಣಾ ಸಿಬ್ಬಂದಿ ಮಣ್ಣಿನಿಂದ ರೆಫ್ರಿಜರೇಟರ್ ಅನ್ನು ಹೊರತೆಗೆಯುತ್ತಿರುವುದನ್ನು ತೋರಿಸಲಾಗಿದೆ. ಮತ್ತೊಂದು ಪೋಸ್ಟ್‌ನಲ್ಲಿ, ರಕ್ಷಣೆ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.
ಬಾಲಕನ ಜೀವ ಉಳಿಸಿದ್ದಕ್ಕೆ ರಕ್ಷಣಾ ಸಿಬ್ಬಂದಿಯನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ. ವರದಿಯ ಪ್ರಕಾರ, ಮಣ್ಣಿನ ಕುಸಿತದಿಂದಾಗಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.