ಶನಿವಾರದಂದು ಮಣಿಪುರದ ಎರಡನೇ ಹಂತದ ವಿಧಾನಸಭಾ ಚುನಾವಣೆ ಪ್ರಾರಂಭವಾಗಿದೆ. ಆದರೆ ಚುನಾವಣೆ ಆರಂಭಕ್ಕು ಮುನ್ನ ರಕ್ತ ಚೆಲ್ಲಿದೆ, ಹಿಂಸಾಚಾರ ಭುಗಿಲೆದ್ದಿದೆ. ಕಾಂಗ್ರೆಸ್ ಕಾರ್ಯಕರ್ತನೊಬ್ಬ ಬಿಜೆಪಿ ಬೆಂಬಲಿಗನನ್ನು ಗುಂಡಿಕ್ಕಿ ಕೊಂದಿದ್ದಾನೆ. ಇನ್ನೊಂದು ಘಟನೆಯಲ್ಲಿ ಕೇಸರಿ ಪಕ್ಷದ ಉಚ್ಚಾಟಿತ ನಾಯಕನ ನಿವಾಸದ ಹೊರಗೆ ಕಚ್ಚಾ ಬಾಂಬ್ ಸ್ಫೋಟಗೊಂಡಿದೆ.
ಗುಂಡಿನ ದಾಳಿಯಿಂದ ಚಿಂತಾಜನಕ ಸ್ಥಿತಿ ತಲುಪಿದ್ದ, 25 ವರ್ಷದ ಎಲ್ ಅಮುಬಾ ಸಿಂಗ್ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸಿಂಗ್, ಇತರ ಬಿಜೆಪಿ ಕಾರ್ಯಕರ್ತರೊಂದಿಗೆ ಮುಂಜಾನೆ ತೌಬಲ್ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತನ ನಿವಾಸಕ್ಕೆ ಹೋಗಿದ್ದರು, ಪ್ರಚಾರದ ಸಮಯ ಮುಗಿದಿರುವುದರಿಂದ ಪ್ರಚಾರವನ್ನು ನಿಲ್ಲಿಸುವಂತೆ ಕಾಂಗ್ರೆಸ್ ಕಾರ್ಯಕರ್ತ ಗಲಾಟೆ ಮಾಡಿದ್ದಾನೆ. ಈ ವಿಷಯದ ಬಗ್ಗೆ ವಾಗ್ವಾದದ ಸಂದರ್ಭದಲ್ಲಿ, ಅವರು ಸಿಂಗ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮುಬಾ ಸಿಂಗ್ ಅವರನ್ನು ಮೊದಲು, ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಇಂಫಾಲ್‌ನಲ್ಲಿರುವ ಮತ್ತೊಂದು ಆಸ್ಪತ್ರೆಗೆ ದಾಖಲಿಸಿದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಿಂಗ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಸಿಂಗ್ ಅವರ ಮೇಲೆ ಗುಂಡು ಹಾರಿಸಿದ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಸ್ಥಳೀಯರು ಹಾಗೂ ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ, ಆತನನ್ನು ಚಿಕಿತ್ಸೆ ಮುಗಿದ ನಂತರ ಬಂಧಿಸಲಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಮಣಿಪುರದ ಇಂಫಾಲದ ಪಶ್ಚಿಮ ಜಿಲ್ಲೆಯ ಲ್ಯಾಂಫೆಲ್ ಪ್ರದೇಶದಲ್ಲಿ ಉಚ್ಚಾಟಿತ ಬಿಜೆಪಿ ನಾಯಕ ಸಿ ಬಿಜೋಯ್ ಅವರ ನಿವಾಸದ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಚ್ಚಾ ಬಾಂಬ್ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಪ್ರಾರಂಭವಾಗುವ ಕೆಲವೇ ಗಂಟೆಗಳ ಮೊದಲು ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಇಬ್ಬರು ಮುಸುಕುಧಾರಿಗಳಿಂದ ಸ್ಫೋಟವಾಗಿದೆ. ಆದರೆ ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.