ಮಣಿಪಾಲದಲ್ಲಿರುವ ವೇಣುಗೋಪಾಲ ದೇವಸ್ಥಾನ ಸರ್ವ ಧರ್ಮ ಸಮನ್ವಯವನ್ನು ಸಾರುವಂತದ್ದು. ಇಲ್ಲಿಗೆ ಭೇಟಿ ನೀಡುವವರು ಅಚ್ಚರಿಯಿಂದ ಕಣ್ಣರಳಿಸಿ ನೋಡುವುದು ದೇವಾಲಯ ಆಕೃತಿಯನ್ನು. ಮೇಲಿನಿಂದ ಕಾಣಲು ಚರ್ಚ್ ನಂತೆ, ಹೊರಗಿನಿಂದ ಮಸೀದಿಯಂತೆ ಗುಮ್ಮಟಾಕಾರದಲ್ಲಿರುವ ಈ ದೇಗುಲದೊಳಗೆ ಪೂಜಿಸುವುದು ವೇಣುಗೋಪಾಲನನ್ನು. ಇಲ್ಲಿನ ಬಾಲಕೃಷ್ಣ, ಸರ್ವ ಧರ್ಮ ಸಮನ್ವಯವನ್ನು ಬಿಂಬಿಸುತ್ತಾನೆ.
ಅದರೊಂದಿಗೆ ಇಲ್ಲಿ ಸುಬ್ರಹ್ಮಣ್ಯ, ಗಣಪತಿ ದೇವರೂ ಪೂಜಿಸಲ್ಪಡುತ್ತಾರೆ. ಸುತ್ತಲಿರುವ ಹಸಿರು ಉದ್ಯಾನ ದೇವಳಕ್ಕೆ ವಿಶಿಷ್ಟ ನೋಟವನ್ನು ತಂದುಕೊಟ್ಟಿದೆ. ಸಮೀಪದಲ್ಲೇ ಇರುವ ಮಣ್ಣಪಳ್ಳ, ಎಂಡ್ ಪಾಯಿಂಟ್ ಮತ್ತಿತರ ಸ್ಥಳಗಳನ್ನು ಇದರೊಂದಿಗೆ ವೀಕ್ಷಿಸಬಹುದು.
ಮುಂಜಾನೆಯಿಂದ ಸಂಜೆ 7ರ ತನಕ ತೆರೆದಿರುವ ಈ ದೇವಾಲಯದಲ್ಲಿ ಶ್ರೀಕೃಷ್ಣನ ವಿಶೇಷ ಪೂಜೆಗಳು ನಡೆಯುತ್ತವೆ. ಸಂಕಷ್ಟಿ ಸಹಿತ ಅನೇಕ ವೃತಗಳನ್ನು ಅಚರಿಸಲಾಗುತ್ತದೆ. ಮಣಿಪಾಲದಿಂದ ಅಲೆವೂರು ರಸ್ತೆಯಲ್ಲಿ ಒಂದು ಕಿ.ಮೀ.ದೂರದಲ್ಲಿರುವ ಈ ದೇಗುಲವನ್ನು ಕಾಲ್ನಡಿಗೆಯಲ್ಲೂ ತಲುಪಬಹುದು, ಇಲ್ಲವೇ ಅಟೋದಲ್ಲೂ ತೆರಳಬಹುದು. ಅಸುಪಾಸಿನ ಉದ್ಯಾನದಲ್ಲಿ ಸಂಜೆಯ ವಾಕಿಂಗ್ ಮಾಡಿ ಮನಸ್ಸನ್ನೂ ಉಲ್ಲಾಸಗೊಳಿಸಿಕೊಳ್ಳಬಹುದು.