ಬಾಗಲಕೋಟೆ- ವಿಧಾನಸಭಾ ಚುನಾವಣೆ ಹತ್ತಿರ ಬರ್ತಾ ಇದ್ದ ಹಾಗೆ ರಾಜಕಾರಣಿಗಳ ಮಕ್ಕಳು ಚುನಾವಣೆಗೆ ನಿಲ್ತಾರೆ ಅನ್ನೋ ಮಾತುಗಳು ಹೆಚ್ಚಾಗ್ತಾ ಇದೆ. ಮಕ್ಕಳಿಗೂ ಟಿಕೆಟ್ ಕೊಡಿಸುವ ನಿಟ್ಟಿನಲ್ಲಿ ಅನೇಕ ರಾಜಕಾರಣಿಗಳು ಓಡಾಡ್ತಾ ಇರೋದಂತೂ ಸತ್ಯ. ಈ ಮಧ್ಯೆ ಮುರುಗೇಶ್ ನಿರಾಣಿ ಮಗ ಚುನಾವಣೆಗೆ ನಿಲ್ತಾರೆ ಅನ್ನೋ ಗುಸು ಗುಸು ಶುರುವಾಗಿತ್ತು. ಆದರೆ ಅದಕ್ಕೀಗ ಮುರುಗೇಶ್ ನಿರಾಣಿಯವರೇ ಸ್ಪಷ್ಟನೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿರುವ ಅವರು, ಮಗನ ರಾಜಕೀಯ ಆಸಕ್ತಿ ಕುರಿತು ಸ್ಪಷ್ಟನೆ ನೀಡಿದ್ದಾರೆ. ನನ್ನ ಮಗನಿಗೆ ರಾಜಕಾರಣಕ್ಕೆ ಬರುವ ಆಸಕ್ತಿಯಿಲ್ಲ. ಯಾವುದೇ ಕಾರಣಕ್ಕೂ ನನ್ನ ಮಗ ರಾಜಕಾರಣಕ್ಕೆ ಬರುವುದಿಲ್ಲ ಎಂದಿದ್ದಾರೆ. ನಮ್ಮ ಕುಟುಂಬದಲ್ಲಿ ಮುರುಗೇಶ್ ನಿರಾಣಿ ಮತ್ತು ಹನಮಂತ ನಿರಾಣಿ ಮಾತ್ರ ರಾಜಕೀಯದಲ್ಲಿ ಇರುತ್ತಾರೆ. ನಾವಿಬ್ಬರು ಮಾತ್ರ ರಾಜಕೀಯದಲ್ಲಿ ಇರ್ತೀವಿ. ನಮ್ಮ ಮನೆಯಿಂದ ಮೂರನೇಯವರು ಯಾರೂ ಸ್ಪರ್ಧೆ ಮಾಡುವುದಿಲ್ಲ ಎಂದಿರುವ ಅವರು, ಒಂದು ವೇಳೆ ಮನೆಯಿಂದ ಮೂರನೇ ವ್ಯಕ್ತಿ ಯಾರಾದರೂ ಸ್ಪರ್ಧೆ ಮಾಡ್ತೇನೆ ಅಂದ್ರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದರು.
ಇನ್ನು ಮುಂದುವರೆದಂತೆ ನನಗೂ ಇಪ್ಪತ್ತು ವರ್ಷ ಜನ ಆಶೀರ್ವಾದ ಮಾಡಿದ್ದಾರೆ. ನಾನು ಚುನಾವಣೆಗೆ ನಿಲ್ಲದೇ ಹೋದರೆ ಅಥವಾ ಮೂರನೆಯವರು ಯಾರಾದ್ರೂ ನಮ್ಮ ಮನೆಯಿಂದ ಸ್ಪರ್ಧೆ ಮಾಡಿದರೆ ನಾನು ಫ್ಯಾಕ್ಟರಿ ನೋಡಿಕೊಂಡು ಇರುತ್ತೇನೆ ಎಂದಿದ್ದಾರೆ. ಹೀಗಾಗಿ ನನ್ನ ಮಗ ಮಾತ್ರ ರಾಜಕಾರಣಕ್ಕೆ ಬರಲ್ಲ. ದೇಶ, ವಿದೇಶಗಳಲ್ಲಿ ನನ್ನ ಮಗ ಕೈಗಾರಿಕೋದ್ಯಮಗಳ ಎದುರು, ವಿದ್ಯಾರ್ಥಿಗಳ ಎದುರು ಸ್ಪೀಚ್ ಮಾಡ್ತಾನೆ. ಅವನಿಗೆ ಒಂದು ಟಾರ್ಗೆಟ್ ಇದೆ ಎಂದು ಹೇಳಿದರು.